Advertisement
ನಿಗದಿತ ಕಾರ್ಯಕ್ರಮದ ಪ್ರಕಾರ ಮುಖ್ಯಮಂತ್ರಿ ಅವರು ಮಧ್ಯಾಹ್ನ 2 ಗಂಟೆಗೆ ಡೋಲಿ ಮೂಲಕ ವಿಂಧ್ಯಗಿರಿ ಹತ್ತಿ ಬಾಹುಬಲಿಮೂರ್ತಿಯ ಮಹಾಮಸ್ತಕಾಭಿಷೇಕ ನೆರವೇರಿಸಬೇಕಿತ್ತು. ಅದರೆ ಮೆಟ್ಟಿಲುಗಳ ಬಳಿ ಬಂದ ತಕ್ಷಣ ಡೋಲಿ ಹತ್ತಲು ನಿರಾಕರಿಸಿದರು. ಮೆಟ್ಟಿಲು ಹತ್ತಿಯೇ ಬಾಹುಬಲಿಮೂರ್ತಿಯ ಅಭಿಷೇಕ ಮಾಡುವ ನಿರ್ಧಾರ ಪ್ರಕಟಿಸಿ ಉರಿ ಬಿಸಿಲಿನಲ್ಲಿಯೇ ಬೆಟ್ಟ ಹತ್ತಲು ಅರಂಭಿಸಿದರು.ಮುಖ್ಯಮಂತ್ರಿಯವರ ಜೊತೆ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರೀ ಅವರೂ ಮುಖ್ಯಮಂತ್ರಿಯವರ ಜೊತೆ ಮೆಟ್ಟಿಲು ಮೂಲಕವೇ ವಿಂಧ್ಯಗಿರಿ ಹತ್ತಿದರು, ಬಾಹುಬಲಿ ಮೂರ್ತಿಯ ಅಟ್ಟಣಿಗೆ ಬಳಿ ಆಗಮಿಸಿ ಲಿಫ್ಟ್ ಮೂಲಕ ಬಾಹುಬಲಿ ಮೂರ್ತಿಯ ಮಸ್ತಕದತ್ತ ಮೇಲೇರಿದ ಸಿಎಂ ಮಧ್ಯಾಹ್ನ 3.35ಕ್ಕೆ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಿದರು.
ಅಭಿಷೇಕ ನೇರವೇರಿಸಿದ ನಂತರ ಬಾಹುಬಲಿ ಮೂರ್ತಿಯ ಪ್ರವೇಶ ದ್ವಾರದ ಬಳಿ ಕಾಯುತ್ತ ಕುಳಿತ್ತಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಹುಬಲಿ ಮೂರ್ತಿಯ ನೆಲೆಯಲ್ಲಿ ಅಹಿಂಸಾ ತತ್ವ ಪಾಲನೆ ಮಾಡಬೇಕೆಂದು ಅನಿಸಿತು. ಹಾಗಾಗಿ ಡೋಲಿ ಏರದೇ ಮೆಟ್ಟಿಲ ಮೂಲಕ ಮೇಲಕ್ಕೆ ಬಂದೆ ಎಂದು ಸ್ಪಷ್ಟಪಡಿಸಿದರು. ಮಹಾಮಸ್ತಕಾಭಿಷೇಕಕ್ಕೆ ನೆರವು ನೀಡುವುದು ಸರ್ಕಾರದ ಜವಬ್ದಾರಿಯಾಗಿದ್ದು, ಹಾಗಾಗಿ ಯಾವುದೇ ಕೊರೆತೆ ಆಗದಂತೆ ಸಹಕರಿಸಿದ್ದೇನೆ. ಇದರಲ್ಲಿ ವಿಶೇಷವೇನು ಇಲ್ಲ ಎಂದು ಸ್ವಾಮೀಜಿಯವರ ಧನ್ಯವಾದಕ್ಕೆ ವಿನಯದಿಂದ ನುಡಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಮಹಾಮಸ್ತಕಾಭಿಷೇಕ ರಾಜ್ಯ ಸಮತಿ ಸಹ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ವಿಶೇಷಾಧಿಕಾರಿ ರಾಕೇಶ್ ಸಿಂಗ್, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮತ್ತಿತರರು ಹಾಜರಿದ್ದರು.
Related Articles
Advertisement