ಕಾಳಗಿ: ದೇಶದ ಯೋಧರು ಸುರಕ್ಷಿತವಾಗಿದ್ದರೆ ಮಾತ್ರ ನಾವು, ದೇಶ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂದು ಸುಗೂರ ರುದ್ರಮುನೀಶ್ವರ ಮಠದ ಪೂಜ್ಯ ಚೆನ್ನರುದ್ರಮುನಿ ಶಿವಾಚಾರ್ಯರು ನುಡಿದರು.
ಇತ್ತೀಚೆಗೆ ತಮಿಳುನಾಡಿನ ಕಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ವೀರ ಯೋಧರ ಆತ್ಮಕ್ಕೆ ಶಾಂತಿ ದೊರಕಲು ಶ್ರೀರಾಮ ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಪಕ್ಕದಲ್ಲಿ ಚೀನಾ, ಪಾಕಿಸ್ತಾನದಂತ ಶತ್ರು ರಾಷ್ಟ್ರಗಳು ಇರುವುದರಿಂದ ದೇಶಕ್ಕೆ ಸೇನೆಯ ಅಗತ್ಯತೆ ಬಹಳಷ್ಟಿದೆ. ಆದ್ದರಿಂದ ನಮ್ಮನ್ನು, ನಮ್ಮ ದೇಶವನ್ನು ವಿರೋಧಿ ದೇಶಗಳಿಂದ ಕಾಪಾಡುವ ಶಕ್ತಿ ಸೈನಿಕರಿಗೆ ಮಾತ್ರ ಇದೆ. ನಮ್ಮ ಯೋಧರು ಮತ್ತು ಅವರ ಕುಟುಂಬ ಸದಾಕಾಲ ಚೆನ್ನಾಗಿರಬೇಕು. ಅವರ ಸುರಕ್ಷತೆಗಾಗಿ ನಾವೆಲ್ಲರೂ ದಿನನಿತ್ಯ ಪ್ರಾರ್ಥನೆ ಮಾಡೋಣ ಎಂದರು.
ಆರ್‌ಎಸ್‌ಎಸ್ ಸ್ವಯಂಸೇವಕ ಹನುಮಂತಪ್ಪ ಕಾಂತಿ ಮಾತನಾಡಿ, ಹೆಲಿಕಾಪ್ಟರ್ ದುರಂತದಲ್ಲಿ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೂ ಬಲಿಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಡೊಣ್ಣೂರ ಸಾರಂಗಧರೇಶ್ವರ ಮಠದ ಪೂಜ್ಯ ಪ್ರಶಾಂತ ದೇವರು, ಕಾಳಗಿ ಹಿರೇಮಠದ ಗುರುನಂಜಯ್ಯ ಸ್ವಾಮಿ, ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಜಗದೀಶ ಪಾಟೀಲ, ಉಪಾಧ್ಯಕ್ಷ ಸಂಗಮೇಶ ಬಡಿಗೇರ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ರಟಕಲ್, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಶಿವಶರಣಪ್ಪ ಗುತ್ತೇದಾರ, ರಾಜು ಶಿಳ್ಳಿನ್, ಅಮೃತ ಪಾಟೀಲ, ಉದಯಕುಮಾರ ಸುಂಠಾಣ, ಬೀರಪ್ಪ ಪೂಜಾರಿ, ರಾಹುಲ ಚಿತ್ತಾಪುರ ಮತ್ತಿತರರು ಇದ್ದರು.