Advertisement

“ಶ್ರದ್ಧಾ ಪ್ರಕರಣ ಆಕಸ್ಮಿಕ’; ರಾಜಸ್ಥಾನ ಸಿಎಂ ಗೆಹ್ಲೋಟ್ ವಿವಾದಿತ ಹೇಳಿಕೆ

09:22 PM Nov 22, 2022 | Team Udayavani |

ನವದೆಹಲಿ: “ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ಪ್ರಕರಣವು ಒಂದು ಆಕಸ್ಮಿಕ ಘಟನೆಯಷ್ಟೆ. ಅದರಲ್ಲಿ ಹೊಸದೇನೂ ಇಲ್ಲ. ಎಷ್ಟೋ ಶತಮಾನಗಳಿಂದಲೂ ಅಂತರ್‌ಜಾತಿ, ಅಂತರ್‌ ಧರ್ಮೀಯ ವಿವಾಹಗಳು ನಡೆಯುತ್ತಲೇ ಇವೆ. ಅದರಲ್ಲಿ ವಿಶೇಷವೇನಿದೆ?’ಇದು ದೇಶವನ್ನೇ ಬೆಚ್ಚಿಬೀಳಿಸಿರುವ ಶ್ರದ್ಧಾ ವಾಕರ್‌ ಪ್ರಕರಣ ಕುರಿತು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಆಡಿರುವ ಮಾತು.

Advertisement

ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್, “ಒಂದು ಘಟನೆ ನಡೆದಿದೆ. ಅದು ಆಕಸ್ಮಿಕವಷ್ಟೆ. ಬಿಜೆಪಿಯವರು ಒಂದು ಸಮುದಾಯ, ಒಂದು ಧರ್ಮವನ್ನು ಯಾವತ್ತೂ ಟಾರ್ಗೆಟ್‌ ಮಾಡುತ್ತಾರೆ. ಅದರ ಆಧಾರದಲ್ಲೇ ನಮ್ಮ ದೇಶದಲ್ಲಿ ರಾಜಕೀಯ ನಡೆಯುತ್ತಿದೆ. ಬೆಂಕಿ ಹೊತ್ತಿಸುವುದು ಸುಲಭ, ಆದರೆ ಅದನ್ನು ಆರಿಸುವುದೇ ಕಷ್ಟದ ಕೆಲಸ’ ಎಂದಿದ್ದಾರೆ.

ಗೆಹ್ಲೋಟ್ ಹೇಳಿಕೆ ವಿರುದ್ಧ ಕಿಡಿಕಾರಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್‌ ಪೂನಾವಾಲ, “ಇಂಥದ್ದೊಂದು ಘಟನೆಯನ್ನು ಸಾಮಾನ್ಯ ಘಟನೆಯಂತೆ ನೋಡುವುದು ಅಚ್ಚರಿಯ ವಿಚಾರ. ಲವ್‌ ಜಿಹಾದ್‌, ಮತಾಂತರವನ್ನು ಇಂಥ ವ್ಯವಸ್ಥಿತ ಸಂಚಿನ ಮೂಲಕವೇ ನಡೆಸಲಾಗುತ್ತದೆ’ ಎಂದಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆಗೆ ಅಸ್ತು:
ಶ್ರದ್ಧಾ ವಾಕರ್‌ ಪ್ರಕರಣದ ಹಿಂದಿನ ಸತ್ಯವನ್ನು ಬಯಲಿಗೆಳೆಯುವ ಸಲುವಾಗಿ ಆರೋಪಿ ಅಫ್ತಾಬ್‌ ಪೂನಾವಾಲನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ದೆಹಲಿಯ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಜತೆಗೆ, ಆರೋಪಿಯನ್ನು ಮತ್ತೆ 4 ದಿನಗಳ ಪೊಲೀಸ್‌ ವಶಕ್ಕೊಪ್ಪಿಸಿದೆ. ಕೋರ್ಟ್‌ ಅನುಮತಿ ದೊರೆತ ಕಾರಣ, ಬುಧವಾರ ಅಫ್ತಾಬ್‌ನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸುವ, ನಂತರದಲ್ಲಿ ನಾರ್ಕೋ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.

Advertisement

ಇದೇ ವೇಳೆ, “ನನಗೆ ಶ್ರದ್ಧಾಳನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಇಬ್ಬರ ನಡುವೆ ಜಗಳ ತಾರಕಕ್ಕೇರಿದಾಗ ಸಿಟ್ಟಿನ ಭರದಲ್ಲಿ ಈ ಕೃತ್ಯವೆಸಗಿದೆ. ಜತೆಗೆ ನನ್ನ ಬಗ್ಗೆ ಏನೆಲ್ಲಾ ಹೇಳಲಾಗುತ್ತಿದೆಯೋ ಅದು ಸಂಪೂರ್ಣ ಸತ್ಯವಲ್ಲ’ ಎಂದು ಅಫ್ತಾಬ್‌ ಕೋರ್ಟ್‌ ಮುಂದೆ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆದರೆ, ಕೋರ್ಟ್‌ನ ಹೊರಗೆ ಮಾತನಾಡಿದ ಅಫ್ತಾಬ್‌ ಪರ ವಕೀಲರು, “ಶ್ರದ್ಧಾಳನ್ನು ತಾನೇ ಕೊಂದಿದ್ದಾಗಿ ಅಫ್ತಾಬ್‌ ಕೋರ್ಟ್‌ ಮುಂದೆ ಒಪ್ಪಿಕೊಂಡಿಲ್ಲ’ ಎಂದಿದ್ದಾರೆ.

ಈ ನಡುವೆ, ಮಂಗಳವಾರ ವಿಧಿವಿಜ್ಞಾನ ತಂಡವು ಅಫ್ತಾಬ್‌ನ ಫ್ಲ್ಯಾಟ್‌ನ ಬಾತ್‌ರೂಂ ಟೈಲ್ಸ್‌ನಲ್ಲಿ ರಕ್ತದ ಕಲೆಯಿರುವುದನ್ನು ಪತ್ತೆಹಚ್ಚಿದೆ. ಆ ಟೈಲ್ಸ್‌ ಅನ್ನು ಡಿಎನ್‌ಎ ಪರೀಕ್ಷೆಗಾಗಿ ಲ್ಯಾಬ್‌ಗ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next