ದಾವಣಗೆರೆ: ಹಂದಿ ನಿರ್ಮೂಲನೆ ಬಗ್ಗೆ ನಾನು ಆಶ್ವಾಸನೆ ನೀಡಲ್ಲ. ನಿರ್ಮೂಲನೆ ಮಾಡಿ ತೋರಿಸುತ್ತೇನೆಂದು ನೂತನ ಮೇಯರ್ ಅನಿತಾ ಬಾಯಿ ಮಾಲತೇಶ್ ಖಡಕ್ ಆಗಿ ಹೇಳಿದ್ದಾರೆ. ನೂತನ ಮೇಯರ್ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹಂದಿ ನಿರ್ಮೂಲನೆ ಕುರಿತು ಕೇಳಿದ ಪ್ರಶ್ನೆಗೆ, ಈ ಹಿಂದೆ ಮೇಯರ್, ಉಪ ಮೇಯರ್ ಹಂದಿ ನಿರ್ಮೂಲನೆಗೆ ಕೆಲಸ ಮಾಡಿದರು.
ಹಂದಿ ಮಾಲೀಕರು ಸಹ ಸಹಕಾರ ನೀಡಿದ್ದರು. ನಾನು ಅವರಿಗಿಂತ ಹೆಚ್ಚಿನ ಪ್ರಯತ್ನ ಮಾಡುತ್ತೇನೆ. ಹಂದಿ ನಿರ್ಮೂಲನೆ ವಿಷಯದಲ್ಲಿ ಆಶ್ವಾಸನೆ ನೀಡದೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು. ಸದ್ಯ ಬೇಸಿಗೆ ಕಾಲ ಇರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಮಸ್ಯೆ ಪರಿಹರಿಸುವತ್ತ ಹೆಚ್ಚಿನ ಗಮನ ನೀಡಲಿದ್ದೇನೆ. ನನಗೆ ಒಂದು ವರ್ಷದ ಅವಧಿ ಇರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ನಗರವನ್ನ ದೂಳುಮುಕ್ತ ಮಾಡಲು ಪ್ರಯತ್ನ ಮಾಡುತ್ತೇನೆ.
ಸ್ವತ್ಛತೆಗೆ ಹೆಚ್ಚಿನ ಒತ್ತುಕೊಡುತ್ತೇನೆ ಎಂದು ಅವರು ತಿಳಿಸಿದರು. ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಯೋಜನೆಗಳ ಅಡಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿ ನಡೆಯುತ್ತಿವೆ. ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವೆ ಎಂದು ಅವರು ಹೇಳಿದರು.
ಉಪ ಮೇಯರ್ ಜಿ. ಮಂಜಮ್ಮ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೆ ದಾವಣಗೆರೆ ಭಾಗದಲ್ಲಿ ಸಾಕಷ್ಟು ಕಾಮಗಾರಿಗಳು ಈ ವರ್ಷ ನಡೆಯಲಿವೆ. ಕೆ.ಆರ್. ಮಾರುಕಟ್ಟೆ ನವೀಕರಣ, ಮಂಡಿಪೇಟೆಯ ಆಧುನೀಕರಣ ಸೇರಿದಂತೆ ಹಲವು ಕಾಮಗಾರಿಗಳನ್ನ ತ್ವರಿತವಾಗಿ ಕೈಗೊಳ್ಳಲು ನಾನು ಶ್ರಮಿಸುತ್ತೇನೆ ಎಂದರು.