Advertisement
ಪಿಡಿಒ ಚಂದ್ರಾವತಿ ಮಾತನಾಡಿ, ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು. ನೋಡಲ್ ಅಧಿಕಾರಿ ಪಾಲಿಚಂದ್ರ ಮಾತನಾಡಿ, ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಹಾಗಾಗಿ ಗೈರು ಆಗಿರಬಹುದು ಎಂದರು. ಅಧಿಕಾರಿಗಳು ಗೈರಾಗಿದ್ದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಿ.ಜಿ.ಎಸ್.ಎನ್. ಪ್ರಸಾದ್ ಮಾತನಾಡಿ, ಕಟ್ಟಡ ತೆರಿಗೆ ಎಷ್ಟು ಬಾಕಿ ಇದೆ? ಎಷ್ಟು ವಸೂಲಿ ಆಗಿದೆ ಎನ್ನುವುದನ್ನು ವರದಿಯಲ್ಲಿ ತೋರಿಸಬೇಕಿತ್ತು ಎಂದರು. ಕಳೆದ ವರ್ಷ ಶೇ. 90ರಷ್ಟು ತೆರಿಗೆ ಸಂಗ್ರಹವಾಗಿದೆ. ಕಟ್ಟದೇ ಬಾಕಿ ಇರುವವರಿಗೆ ನೋಟಿಸ್ ನೀಡಲಾಗಿದೆ ಎಂದು ಪಿಡಿಒ ಹೇಳಿದರು. ಕೂಸಪ್ಪ ಗೌಡ ಮಾತನಾಡಿ, ಕಲ್ಮಡ್ಕ ರಸ್ತೆ ಬದಿಯ ಚರಂಡಿಯಲ್ಲಿ ಮಳೆ ನೀರು ಹೋಗದ ಸ್ಥಿತಿ ಇದೆ. ರಸ್ತೆ ಅವ್ಯವಸ್ಥೆಯಾಗಿದೆ. ಇದನ್ನು ಸರಿ ಮಾಡುವವರು ಯಾರು? ಇಲಾಖಾಧಿಕಾರಿಗಳು ಪರಿಶೀಲಿಸಿದರೆ ಗೊತ್ತಾಗುತ್ತದೆ ಎಂದರು. ಜಿ.ಪಂ. ಎಂಜಿನಿಯರ್ ಮಣಿಕಂಠನ್ ಮಾಹಿತಿ ನೀಡಿ, ರಸ್ತೆಯಿಂದ ಮನೆಗೆ ದಾರಿ ಬಳಸುವವರು ಮೋರಿ ಹಾಕಿ ಸಂಪರ್ಕ ತೆಗೆದುಕೊಳ್ಳಬೇಕು. ಆಗ ಚರಂಡಿ ಸರಿ ಆಗುತ್ತದೆ ಎಂದರು.
Related Articles
ಸುಧಾಕರ ರೈ, ವಸಂತ ಕಾಯಾರ ಮಾತನಾಡಿ, ಬೆಳೆ ವಿಮೆಯ ಬಗ್ಗೆ ಇಲಾಖೆಯಿಂದ ಮಾಹಿತಿ ನೀಡಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ, ಬೆಳೆ ವಿಮೆಯ ಬಗ್ಗೆ ನಾವು ಪಂಚಾಯತ್‌ಗೆ ಈ-ಮೇಲ್ ಮೂಲಕ ತಿಳಿಸಿದ್ದೇವೆ ಎಂದರು. ನೀವು ಪಂಚಾಯತ್‌ಗೆ ತಿಳಿಸಿದರೆ ರೈತರಿಗೆ ಹೇಗೆ ಗೊತ್ತಾಗುತ್ತದೆ? ರೈತರು ಎಲ್ಲರೂ ಪಂಚಾಯತ್‌ಗೆ ಬರುತ್ತಾರೆಯೇ? ರೈತರಿಗೆ ಇರುವ ಸವಲತ್ತುಗಳ ಬಗ್ಗೆ ನೀವು ಸರಿಯಾಗಿ ಮಾಹಿತಿ ನೀಡಿದರೆ ಮಾತ್ರ ಪ್ರಯೋಜನ ಸಿಗಲು ಸಾಧ್ಯ. ಸಹಕಾರಿ ಸಂಘಗಳಿಗೂ ತಿಳಿಸಬೇಕು ಎಂದು ಸುಧಾಕರ ರೈ ಹೇಳಿದರು. ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾಗಿ ಅಧಿಕಾರಿ ಉತ್ತರಿಸಿದಾದರೂ, ಇಲಾಖೆ ಸಹಕಾರಿ ಸಂಘಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಅವಧಿಗೆ ಮೊದಲ ದಿನ ಮಾಹಿತಿ ತಿಳಿದು, ಶೇ. 75ರಷ್ಟು ಜನರಿಗೆ ಸಹಕಾರಿ ಸಂಘದಲ್ಲಿ ವಿಮೆ ಮಾಡಿಸಿದ್ದೇವೆ. ಮೊದಲೇ ತಿಳಿದಿದ್ದರೆ ಎಲ್ಲರಿಗೂ ವಿಮೆ ಸೌಲಭ್ಯ ಸಿಗುತಿತ್ತು ಎಂದರು.
Advertisement
ತಾ.ಪಂ. ಸದಸ್ಯೆ ಜಾಹ್ನವಿ ಕಾಂಚೋಡು, ಗ್ರಾ.ಪಂ. ಸದಸ್ಯರಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಶೀನಪ್ಪ ಮರುವಂಜ, ಜಯಕುಮಾರಿ ದೇವಸ್ಯ, ಸರಸ್ವತಿ ಪೊಸೋಡು, ರಮೇಶ್ ರೈ ಅಗಲ್ಪಾಡಿ, ಯಮುನಾ ಅಯ್ಯನಕಟ್ಟೆ ಉಪಸ್ಥಿತರಿದ್ದರು. ಸಿಬಂದಿ ಜಯಂತಿ ವರದಿ ಮಂಡಿಸಿದರು. ರವೀಂದ್ರ ರೈ ವಂದಿಸಿದರು.
ಮರ ಕಡಿಯಲು ಬಿಡೋಲ್ಲಬೆಳ್ಳಾರೆ ಕಡೆಯಿಂದ ಗುತ್ತಿಗಾರು ಕಡೆಗೆ 33 ಕೆ.ವಿ. ವಿದ್ಯುತ್ ಲೈನ್ ಬಾಳಿಲದ ಮೂಲಕ ಹಾದು ಹೋಗುತ್ತದೆ. ಇದಕ್ಕೆ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯುವ ಯೋಜನೆ ಇದೆ. ಆದರೆ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲ. ಬೆಳ್ಳಾರೆಯಲ್ಲಿ ಮಣ್ಣಿನ ಒಳಗೆ ಕೇಬಲ್ ಹಾಕಿ ವಿದ್ಯುತ್ ಲೈನ್ ಎಳೆದ ಹಾಗೆಯೇ ಮಾಡಿಕೊಂಡು ಹೋಗಲಿ ಎಂದು ವಸಂತ ಕಾಯಾರ, ಕೌಶಿಕ್ ಮತ್ತು ಸುಧಾಕರ ರೈ ಹೇಳಿದರು. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮೆಸ್ಕಾಂ ಅಧಿಕಾರಿ ಪ್ರತ್ಯುತ್ತರಿಸಿದರು.