Advertisement

ವೈನ್‌ಶಾಪ್‌ಗೆ ಶೋಕಾಸ್‌ ನೋಟಿಸ್‌: ನಿರ್ಧಾರ 

10:16 AM Dec 01, 2017 | Team Udayavani |

ಮೂಲ್ಕಿ: ನಗರ ಪಂಚಾಯತ್‌ ವ್ಯಾಪ್ತಿಯ ಕಾರ್ನಾಡು ಸದಾಶಿವ ರಾವ್‌ ನಗರದ ಎರಡು ವೈನ್‌ ಶಾಪ್‌ಗಳಿಂದ  ಆ ವ್ಯಾಪ್ತಿಯ ಜನರಿಗೆ ತೊಂದರೆ ಆಗುತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರ ಪಂಚಾಯತ್‌ ಕೊಟ್ಟಿರುವ ಎನ್‌. ಒ.ಸಿ.ಯನ್ನು 15 ದಿನಗಳ ಶೋಕಾಸ್‌ ನೋಟಿಸ್‌ ನೀಡಿ ಹಿಂಪಡೆಯಲು ಅಧ್ಯಕ್ಷ ಸುನೀಲ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿದ ನಗರ ಪಂಚಾಯತ್‌ನ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಕಿಲ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೈಲು ನಿಲ್ದಾಣ ಬಳಿಯ ರಸ್ತೆಯ ಒಂದು ವೈನ್‌ ಶಾಪ್‌ನಿಂದಲೂ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದ್ದು, ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಸಮಸ್ಯೆ ಸರಿಯಾದ ಮೇಲೆ ನಮ್ಮ ಸುಪರ್ದಿಗೆ
ಕಾರ್ನಾಡು ವ್ಯಾಪ್ತಿ ಕೈಗಾರಿಕ ಪ್ರದೇಶದ ದಾರಿ ದೀಪ ಹಾಗೂ ರಸ್ತೆಯ ಕಾಮಗಾರಿ ಪೂರ್ತಿಗೊಂಡ ಬಳಿಕ ಈ ಪ್ರದೇಶವನ್ನು ನಗರ ಪಂಚಾಯತ್‌ ತನ್ನ ಸುಪರ್ದಿಗೆ ಸೇರಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಇಲಾಖೆಗೆ ಬರೆದ ಪತ್ರವನ್ನು ಸಭೆಗೆ ತಿಳಿಸಲಾಯಿತು.

ದಾರಿ ದೀಪ ಅಳವಡಿಸುವ ಸಂದರ್ಭ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿರುವುದು ಹಾಗೂ ಕೇಬಲ್‌ ಅಳವಡಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ಈ ವ್ಯವಸ್ಥೆ ಕೆಟ್ಟು ಹೋಗಲು ಕಾರಣ. ಸದ್ಯ ಒಂದು ಲಕ್ಷ ರೂ. ವಿನಿಯೋಗಿಸಿದರೆ ಅದನ್ನು ಸರಿಪಡಿಸಬಹುದು ಎಂದು ಅಧಿಕಾರಿಗಳು ತಿಳಿಸಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ದಾರಿ ದೀಪದ ವ್ಯವಸ್ಥೆಯಿಂದ ನಗರ ಪಂಚಾಯತ್‌ ವ್ಯಾಪ್ತಿಯ ಜನರಿಗೆ ಪ್ರಯೋಜನ ಇರುವುದರಿಂದಾಗಿ ಕೆಲವು ದೀಪಗಳನ್ನು ಸರಿಪಡಿಸಿದರೆ ಒಳಿತು ಎಂದು ಸದಸ್ಯ ಬಿ.ಎಂ. ಆಸೀಫ್‌ ಸಲಹೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಆರಂಭ
ಈ ಬಾರಿ ಈಗಲೇ ನ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಡಿಸೆಂಬರ್‌ ತಿಂಗಳಿನಿಂದಲೇ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಜರಗಿಸುವಂತೆ ಆಸೀಫ್‌ ಆಗ್ರಹಿಸಿದರು.

Advertisement

ಖಾಸಗಿ ಬಾವಿಗಳಿಂದ ನೀರು ಪೂರೈಕೆ
ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಖಾಸಗಿಯವರ ಬಾವಿ ಅಥವಾ ಬೋರ್‌ವೆಲ್‌ಗ‌ಳಿಂದ ನೀರು ಸಂಗ್ರಹಿಸಿ ಅಗತ್ಯವಿರುವಲ್ಲಿಗೆ ಪೂರೈಕೆ ಮಾಡಲು ಕ್ರಮ ನಡೆಸಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

ಒಳಚರಂಡಿ ಸಮಸ್ಯೆ
ನ.ಪಂ. ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಹಾಲ್‌ ಇತ್ಯಾದಿಗಳ ಕೊಳಚೆ ನೀರು ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶದ ಕೆಲವು ಬಾವಿಗಳಿಗೆ ತೊಂದರೆಯಾಗಿದೆ. ಕೆಲವು ಪರಿಸರವೂ ದುರ್ವಾಸನೆಯಿಂದ ಕೂಡಿದೆ ಮುಂತಾದ ದೂರುಗಳು ಬಂದಿದೆ. ಆದ್ದರಿಂದ ಮೂಲ್ಕಿ ವ್ಯಾಪ್ತಿಯ ಎಲ್ಲ ಕಟ್ಟಡಗಳ ಮಾಲಕರಿಗೆ ನೋಟಿಸ್‌ ನೀಡಿ ಅವರವರ ಜಾಗದಲ್ಲಿ ನೀರು ಇಂಗುವಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲು ಸಭೆ ತೀರ್ಮಾನಿಸಿತು. ಮುಖ್ಯಾಧಿಕಾರಿ ಎಂ. ಇಂದೂ ಸ್ವಾಗತಿಸಿದರು. ನಗರ ಯೋಜನೆ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಜಿ.ಎಂ. ಉಪಸ್ಥಿತರಿದ್ದರು. 

ಪ್ರತಿಭಟನೆ
ಹೆದ್ದಾರಿ ಸಮಸ್ಯೆಯ ಬಗ್ಗೆ ಮಾತನಾಡಿದ ಸುನೀಲ್‌ ಆಳ್ವ, ಡಿ. 1ರಿಂದ ಮತ್ತೆ ಮೂಲ್ಕಿಯ ಸರ್ವಿಸ್‌ ರಸ್ತೆ ಮತ್ತು ಚತುಷ್ಪಥ ಹೆದ್ದಾರಿಯ ಕಾಮಗಾರಿಯನ್ನು ಆರಂಭಿಸುವುದಾಗಿ ಇಲಾಖೆಯ ಯೋಜನಾ ಅಧಿಕಾರಿ ಸ್ಯಾಮ್‌ ಸಂಗ್‌ ನನಗೆ ತಿಳಿಸಿದ್ದಾರೆ. ಒಂದೊಮ್ಮೆ ಕಾಮಗಾರಿ ಆರಂಭವಾಗದಿದ್ದರೆ ಟೋಲ್‌ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next