Advertisement

ಪಾಕಿಸ್ತಾನ ತೋರಿಸಿ ಹಿಂದುಸ್ತಾನದ ಆಳ್ವಿಕೆ

01:18 PM Apr 23, 2017 | |

ದಾವಣಗೆರೆ: ಪಾಕಿಸ್ತಾನ ತೋರಿಸಿ ಭಾರತ ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಿತ್ತೂಗೆಯುವುದು ಕಮ್ಯುನಿಷ್ಟ್ ಪಕ್ಷದವರಿಂದ ಮಾತ್ರ ಸಾಧ್ಯ ಎಂದು  ಆ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ| ಜಿ.ಸಿದ್ಧನಗೌಡ ಪಾಟೀಲ್‌ ಹೇಳಿದ್ದಾರೆ. ಶನಿವಾರ ಶಾಂತಿಪಾರ್ಕ್‌ ಹೋಟೆಲ್‌ ಸಭಾಂಗಣದಲ್ಲಿ ಪಕ್ಷದ ರಾಜ್ಯ ಮಂಡಳಿ ಸಭೆಯಲ್ಲಿ ಮಾತನಾಡಿದರು.

Advertisement

ಬಿಜೆಪಿಯವರು ಪಾಕಿಸ್ತಾನ ತೋರಿಸಿ, ಹಿಂದುಸ್ತಾನ ಆಳುತ್ತಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ಪ್ಯಾಸಿಸಂ ಆಡಳಿತ ನಡೆಸುತ್ತಿದ್ದಾರೆ. ಸದ್ಯ ದೇಶದ ಪ್ರಜಾತಂತ್ರ ವ್ಯವಸ್ಥೆ ಬುಡಮೇಲಾಗಿದೆ. ಪ್ರಸ್ತುತ ದೇಶಕ್ಕೆ ರಾಜಕೀಯ ಬದಲಾವಣೆಗಿಂತ ನೀತಿ ಬದಲಾವಣೆ ಬೇಕಿದೆ. ಅಂದರೆ ಪಕ್ಷದ ಹಿನ್ನೆಲೆಗಿಂತ ಪಕ್ಷದ ತತ್ವ ಸಿದ್ಧಾಂತಗಳ ಆಧಾರದಲ್ಲಿ ಬದಲಾವಣೆ ಮಾಡಬೇಕಿದೆ ಎಂದರು. 

ದೇಶದಲ್ಲಿರುವ 30 ಕೋಟಿ ರೈತಾಪಿ ಜನರು, 45 ಕೋಟಿ ಕಾರ್ಮಿಕ ವರ್ಗ ಇದೆ. ಈ ಪೈಕಿ ಶೇ.90ರಷ್ಟು ಜನರು ಅಸಂಘಟಿತ ಕೂಲಿ ಕಾರ್ಮಿಕರಾಗಿದ್ದಾರೆ.  ಇವರಿಗೆ ರಜಾ ಸೌಲಭ್ಯಗಳಿಲ್ಲ, ಸೂಕ್ತ ಸಂಬಳವಿಲ್ಲ. ಆರೋಗ್ಯ ಸೌಲಭ್ಯವಿಲ್ಲ. ನಿವೃತ್ತಿ ವೇತನವಿಲ್ಲ. ಈ ಎಲ್ಲ ವರ್ಗದವರು ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದು, ಕುರಿಗಳು ಕಟುಕನ ಅಭಿಮಾನಿಗಳಾದಂತಾಗಿದೆ ಎಂದು ಅವರು ವಿಶ್ಲೇಷಿಸಿದರು. 

ಸಭೆ ಉದ್ಘಾಟಿಸಿದ ರಾಜ್ಯ ಸಿಪಿಐ ಮಂಡಳಿ ಕಾರ್ಯದರ್ಶಿ ಪಿ.ವಿ.ಲೋಕೇಶ್‌ ಮಾತನಾಡಿ, ನರೇಂದ್ರ ಮೋದಿ ಬಹುದೊಡ್ಡ ಕನಸುಗಳ ತೋರಿಸಿ ಕಳೆದ ಕೆಲ ತಿಂಗಳ ಹಿಂದೆ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದರು. ಭಾರೀ ದೊಡ್ಡ ಬದಲಾವಣೆ ದೇಶದಲ್ಲಿ ಆಗಲಿದೆ. ಕಪ್ಪುಹಣ ಹೊರ ಬರುತ್ತದೆ ಎಂದೆಲ್ಲಾ ಹೇಳಿದರು.

ದೇಶದ ನಾಗರಿಕರು ಭ್ರಷ್ಟಾಚಾರ ತಡೆಗೆ ಸಹಕರಿಸಬೇಕು ಕೋರಿದರು. ಆದರೆ, ಆದದ್ದೇನು? ಜನರ ಯಾವ ಸಮಸ್ಯೆಯೂ ನಿವಾರಣೆ ಆಗಲಿಲ್ಲ.  ಬದಲಿಗೆ ಸಮಸ್ಯೆಗಳ ಜೊತೆ ಇನ್ನಷ್ಟು ಸಮಸ್ಯೆಗಳು ಸೇರಿಕೊಂಡವು ಎಂದು ಟೀಕಿಸಿದರು. ಇನ್ನೂ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಜನರು ನೀರು, ಕಾಳಿಗಾಗಿ ಹೋರಾಟ ಮಾಡುತ್ತಿದ್ದಾರೆ. 

Advertisement

ಆದರೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿರುವುದು ಅತ್ಯಂತ ವಿಷಾದಕರ ಸಂಗತಿ. ಇತ್ತೀಚೆಗೆ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿ, ಜನರನ್ನು ವಾಮಮಾರ್ಗದ ಮೂಲಕ ಒಲಿಸಿಕೊಳ್ಳಲು ಪ್ರಯತ್ನ ಮಾಡಿವೆ ಎಂದು ಅವರು ಆರೋಪಿಸಿದರು. 

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಧಿಕಾರ ಮತ್ತು ಚುನಾವಣೆಗಾಗಿ ರಾಜಕಾರಣ ಮಾಡುತ್ತವೆ. ಆದರೆ, ನಮ್ಮ ಪಕ್ಷ ದೇಶದ ಕೂಲಿ ಕಾರ್ಮಿಕರು, ಮಹಿಳೆಯರು, ರೈತಾಪಿ ವರ್ಗದವರ ಜೀವನ ಸುಧಾರಣೆ ಆಗಬೇಕು ಎಂಬ ಉದ್ದೇಶ ಇಟ್ಟುಕೊಂಡು  ರಾಜಕೀಯ ಮಾಡುತ್ತಿದೆ. ಇದನ್ನು ಜನತೆ ಮರೆಯಬಾರದು.

ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ರಾಜಕಾರಣ ಮಾಡದೆ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಹೋರಾಟ ಮಾಡುವ ಕುರಿತು ಎರಡು ದಿನಗಳ ಕಾಲ ಸಭೆ ಮೂಲಕ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು. ಸಿಪಿಐ ಕಾರ್ಯದರ್ಶಿ ಎಚ್‌. ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಎನ್‌. ಶಿವಣ್ಣ, ಸ್ವಾತಿ ಸುಂದರೇಶ್‌, ಜಿಲ್ಲಾ ಮಂಡಳಿ ಖಜಾಂಚಿ ಆನಂದ್‌ರಾವ್‌ ಇತರರು ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next