Advertisement

Rainy Season: ಮೊಬೈಲ್‌ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ

03:01 PM Nov 27, 2024 | Team Udayavani |

ಅದೊಂದು ದಿನ, ಮುಂಜಾನೆಯ ಸಮಯ. ಬೆಳಗ್ಗೆ ಬೇಗ ಎದ್ದು ಪೇಟೆಯಲ್ಲಿರುವ ಅಕ್ಕನ ಮನೆಗೆಂದು ಬಸ್ಸಿಗೆ ಹತ್ತಿ ಪ್ರಯಾಣ ಮುಂದುವರೆಸಿದೆ. ಸ್ವಲ್ಪ ಸಮಯದ ಬಳಿಕ ಅಕ್ಕನ ಊರು ತಲುಪಿದೆ.

Advertisement

ಅಕ್ಕನ ಆತಿಥ್ಯ ಸ್ವೀಕರಿಸಿದ ಬಳಿಕ ಅಕ್ಕನ ಮಗನ ಬಳಿಗೆ ಹೋದರೆ, ಅವನು ಮೊಬೈಲ್‌ನಲ್ಲಿ ಆಟ ಆಡುತ್ತಿದ್ದನು. ಹಾಗೋ -ಹೀಗೋ ಹೇಳಿ, ಮೊಬೈಲ್‌ ಬಿಟ್ಟು ಬೇರೆ ಆಟ ಆಡಲು ಎಂದು ಅವನನ್ನು ಒಪ್ಪಿಸಿದೆ. ಹೀಗೆ ಆಟ ಆಡುತ್ತಿರುವ ಸಮಯದಲ್ಲಿ ಅಕ್ಕನ ಮಗನೊಂದಿಗೆ ತಮಾಷೆಗೆ ಒಂದು ಪ್ರಶ್ನೆ ಕೇಳಿದೆ. “ಪುಟ್ಟ ಯಾವ ಕಾಲವೆಂದರೆ ನಿನಗೆ ತುಂಬಾ ಇಷ್ಟ?” ಅದಕ್ಕೆ ಪುಟ್ಟ,’ಮಳೆಗಾಲ’ ಎಂದು ಉತ್ತರ ನೀಡಿದನು. ಅವನ ಬಾಯಿಯಿಂದ ಉತ್ತರ ಹೊರಡುತ್ತಿದ್ದಂತೆ ನಾನು ಕಣ್ಣು ಮುಚ್ಚಿ ನನ್ನ ಬಾಲ್ಯದ ಮಳೆಗಾಲವನ್ನು ಮನಸ್ಸಿನಲ್ಲೇ ಪ್ರವೇಶಿಸಿದೆ.

ಮನೆಯಿಂದ ಶಾಲೆಗೆ ಗೆಳೆಯ-ಗೆಳತಿಯರೊಂದಿಗೆ ಹೋಗುವಾಗ ಮಳೆಯಲ್ಲಿ ಒದ್ದೆಯಾಗುವುದು, ಮತ್ತೆ ಶಾಲೆಯಲ್ಲಿ “ಯಾಕೆ ಒದ್ದೆಯಾದೆ?” ಎಂಬ ಗುರುಗಳ ಪ್ರಶ್ನೆಯ ಮುಂದೆ “ಕೊಡೆ ಇಲ್ಲ ಟೀಚರ್‌’ಎನ್ನುವಂತಹ ಪುಟ್ಟ ಪುಟ್ಟ ಸುಳ್ಳುಗಳು, ಮಳೆಗಾಲದ ಮಧ್ಯಾಹ್ನದ ಶಾಲೆಯ ಬಿಸಿಯೂಟ, ಸಂಜೆ ಮತ್ತೆ ಮಳೆಯಲ್ಲಿ ನೆನೆದುಕೊಂಡು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು, ಅಲ್ಲಲ್ಲಿ ಉಂಟಾಗುವ ತೊರೆಗಳಲ್ಲಿ ಕಾಲಿಡುತ್ತಾ, ಆಟವಾಡುತ್ತಾ ಮನೆಗೆ ತೆರಳುವ ವೇಳೆ ಅಮ್ಮ ಬಾಗಿಲಲ್ಲಿ ನಿಂತು ನನಗಾಗಿ ಕಾಯುತ್ತಿರುವ ದೃಶ್ಯ ಈಗಲೂ ಕಣ್ಣು ತುಂಬುತ್ತದೆ.  ಅಷ್ಟರಲ್ಲಿ ಪುಟ್ಟ ಅದಾಗಲೇ ನನ್ನ ಪ್ರಶ್ನೆಗೆ ಉತ್ತರಿಸಿ ಮತ್ತೆ ಹೋಗಿ ಮೊಬೈಲ್‌ ಆಟ ಪ್ರಾರಂಭಿಸಿದ್ದ.

ಈಗಿನ ಮಕ್ಕಳ ಮನಸ್ಸನ್ನು ಅರಿತು ನಾನು ನನ್ನ ಮನಸ್ಸಿನಲ್ಲೇ ಗೊಣಗಿಕೊಂಡೆ, ಇಂದಿನ ಮಕ್ಕಳು ಕೆಲವು ಆಧುನಿಕ ಉಪಕರಣಗಳನ್ನು ಅತಿಯಾಗಿ ಬಳಸುವುದರಿಂದ ಅವರು ಮನೆಯಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಗೆಳೆಯರನ್ನು ಕೂಡಿ ಆಟವಾಡಲು ಮರೆತೇ ಬಿಟ್ಟಿದ್ದಾರೆ. ಮಳೆಗಾಲದ ನಮ್ಮ ಸವಿಯ ಅನುಭವ ಅವರಿಗೆ ನಷ್ಟವಾಗುತ್ತಿದೆ.

ಇಂದಿನ ಮಕ್ಕಳು ಬೆಳೆದು ಮುಂದೆ ಯುವಕ-ಯುವತಿಯರಾದಾಗ ಅವರ ಬಾಲ್ಯದ ಮಳೆಗಾಲದ ಬಗ್ಗೆ ಹೇಳಿ ಎಂದಾಗ ಅವರಲ್ಲಿ ಉತ್ತರವೇ ಇಲ್ಲದಾಗಬಹುದು. ಉತ್ತರಿಸಿದರೂ ಮನೆಯಲ್ಲಿ ಇಂಟರ್‌ನೆಟ್‌, ಟಿ ವಿ, ಮೊಬೈಲ್‌ ಗಳ ಜತೆ ಕಾಲ ಕಳೆದೆ ಎಂದು ಉತ್ತರಿಸಲು ಮಾತ್ರ ಸಾಧ್ಯ. ಹೀಗೆ ಗೊಣಗುತ್ತ ಕುಳಿತ ನನ್ನನ್ನು ಅಕ್ಕ ಬಂದು ಊಟಕ್ಕೆ ಸಮಯವಾಗಿದೆ. ಇಬ್ಬರೂ ಕೈ ಕಾಲು ತೊಳೆದು, ಬನ್ನಿ ಎಂದಳು. ನಾನು ಮತ್ತು ಪುಟ್ಟ, ಇಬ್ಬರೂ ಕೈಕಾಲು ತೊಳೆದು ಅಕ್ಕ ಮಾಡಿದ ಬಿಸಿ ಬಿಸಿ ಅಡುಗೆಯನ್ನು ಸವಿದು ಪುನಃ ನಮ್ಮ ಆಟವನ್ನು ಮುಂದುವರೆಸಿದೆವು.

Advertisement

-ಶಿಲ್ಪ ಕೆ.ಎನ್‌.

ಮಂಗಳೂರು ವಿ.ವಿ., ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next