Advertisement

ರೈತರಂತೆಯೇ ನಾವೂ ಆತ್ಮಹತ್ಯೆ ಮಾಡಿಕೊಳ್ಳಬೇಕೇ : ದೈವಾರಾಧಕರ ಪ್ರಶ್ನೆ

06:54 PM Jan 07, 2022 | Team Udayavani |

ಕಾಪು : ಕೊರೊನಾ ಕಾರಣದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂನಿಂದಾಗಿ ತೊಂದರೆಗೊಳಗಾಗಿರುವ ದೈವಾರಾಧಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಉಡುಪಿ – ಮಂಗಳೂರು ಇವರ ವತಿಯಿಂದ ಪಾಂಗಾಳ ಗುಡ್ಡೆಗರಡಿಯಲ್ಲಿ ಶುಕ್ರವಾರ ಸಮಾಲೋಚನಾ ಸಭೆ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಪಾಂಗಾಳ ಗುಡ್ಡೆ ಗರಡಿಮನೆ ಸುಧಾಕರ ಡಿ. ಅಮೀನ್ ಮಾತನಾಡಿ, ದೈವಾರಾಧನೆ ಕ್ಷೇತ್ರವನ್ನು ಅವಲಂಭಿಸಿರುವ ಎಲ್ಲಾ ವರ್ಗದವರೂ ಕೊರೊನಾ‌ ಕಾರಣದಿಂದಾಗಿ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ‌ ಪರಿಸ್ಥಿತಿ ಇದೀಗ ಮೂರ‌ನೇ ವರ್ಷಕ್ಕೆ ಕಾಲಿಟ್ಟಿದೆ. ದೈವಾರಾಧನೆಯ ಎಲ್ಲಾ ಆಚರಣೆಗಳೂ ಹಿಂದಿನಂತೆಯೇ ನಡೆಯುವಂತಾಗಲು ಅವಕಾಶ ಮಾಡಿ ಕೊಡುವಂತೆ ಜಿಲ್ಲೆಯ ಎಲ್ಲಾ‌ ಜನಪ್ರತಿನಿಧಿಗಳ ಬೆಂಬಲ ಪಡೆದು, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ನೀಡಬೇಕಿದೆ ಎಂದರು.

ಇದನ್ನೂ ಓದಿ :ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣ: ಯಕ್ಷಗಾನ ಕಲಾವಿದರ ಪ್ರತಿಭಟನೆ

ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಉಪಾಧ್ಯಕ್ಷ ಯೋಗಿಶ್ ಪೂಜಾರಿ ಮಾತನಾಡಿ, ದೈವಾರಾಧನೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾವೆಲ್ಲರೂ ಒಂದಾಗಬೇಕಿದೆ. ದೈವಾರಾಧನೆಗೆ ಬರುವ ಹದಿನಾರು ವರ್ಗದವರೂ ಹೋರಾಟದಲ್ಲಿ ಕೈ ಜೋಡಿಸುವ ಅಗತ್ಯವಿದೆ ಎಂದರು.

Advertisement

ಕುಕ್ಕೆಹಳ್ಳಿ ಕೊರಗಜ್ಜ ದೇವಸ್ಥಾನದ ಮುಖ್ಯಸ್ಥ ಕೃಷ್ಣ ಕುಲಾಲ್ ಮಾತನಾಡಿ, ಕೊರೊನಾ ಬೆದರಿಕೆಯೊಡ್ಡಿ ವೀಕೆಂಡ್ ಕರ್ಫ್ಯೂ ಹೇರಿಕೆಯ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಇದರೊಂದಿಗೆ ದೈವಾರಾಧನೆಯನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ. ಹಿಂದೂ ಧರ್ಮದ ಪುರಾತನ ಸಂಪ್ರಧಾಯ, ಧಾರ್ಮಿಕ ಆಚರಣೆ, ಜನಪದೀಯ ಕಲೆಗಳನ್ನು ಮುಗಿಸಿ ಬಿಡುವ ತಂತ್ರಗಾರಿಕೆ ಎದ್ದು ತೋರುತ್ತಿದೆ ಎಂದರು‌.

ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ ಮಾತನಾಡಿ, ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದುಗೂಡ ಬೇಕಿದೆ. ದೈವಾರಾಧನೆ ಕೇವಲ ದೈವಾರಾಧಕರಿಗೆ ಸೀಮಿತವಾಗಿರದೇ, ಧಾರ್ಮಿಕ ಭಾವನೆಗಳನ್ನು ಹೊಂದಿರುವ ಮತ್ತು ಶಕ್ತಿಗಳ ಬಗ್ಗೆ ನಂಬಿಕೆ ಇಟ್ಟಿರುವ ಎಲ್ಲರಿಗೂ ಮೀಸಲಾಗಿದೆ. ದೈವಾರಾಧನೆ ಕ್ಷೇತ್ರದಲ್ಲಿ ತೊಡಗಿಕೊಂಡ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಮತ್ತು ಮಾನಸಿಕವಾಗಿ‌ ಕುಗ್ಗಿಸುವ ಪ್ರಯತ್ನವನ್ನು ಕೈ ಬಿಡುವಂತೆ ಜನಪ್ರತಿ‌ಧಿಗಳನ್ನು ಸೇರಿಸಿಕೊಂಡು, ಅಧಿಕಾರಿಗಳು ಮತ್ತು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸೋಣ ಎಂದರು.

ಬೈರಂಪಳ್ಳಿ ಭೂತರಾಜ ದೇವಸ್ಥಾನದ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಹಿರಿಯಡಕ ಕಲ್ಕುಡ ದೈವಸ್ಥಾನದ ಮುಖ್ಯಸ್ಥ ಸುಧಾಕರ ಶೆಟ್ಟಿ ತಂಗಣ, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ, ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ, ದೊಡ್ಡಣ್ಣಗಯಡ್ಡೆ ಪಂಚ ಜುಮಾದಿ ದೇವಸ್ಥಾನದ ಗುರಿಕಾರ ನಿತಿನ್ ಪೂಜಾರಿ, ಪಾಣಾರ ಸಂಘದ ಜಿಲ್ಲಾಧ್ಯಕ್ಷ ಪಾಂಡು ಪಾಣಾರ, ಪಂಬದ ಸಮುದಾಯದ ಮುಖಂಡ ಮಾಧವ ಪಂಬದ, ನಲಿಕೆ ಸಮುದಾಯದ ಮುಖಂಡ ನಾರಾಯಣ ಪಾಣಾರ, ದೇವಾಡಿಗ ಸಮುದಾಯದ ಮುಖಂಡ ಉದಯ ಶೇರಿಗಾರ್ ಅಲೆವೂರು, ಪರವ ಸನುದಾಯದ ಮುಖಂಡ ನರಸಿಂಹ ಪರವ ಮೊದಲಾದವರು ಮಾತನಾಡಿದರು.

ಉಡುಪಿ, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲೂಕಿನ ವಿವಿಧೆಡೆಗಳ ದೈವಾರಾಧಕ ಸಂಘಟನೆಯ ಪದಾಧಿಕಾರಿಗಳು, ದೈವಾರಾಧಕರು, ಸಮುದಾಯಗಳ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ತುಳುನಾಡ ದೈವಾರಾಧಕರ ಸಂಘದ ಜಿಲ್ಲಾಧ್ಯಕ್ಷ ವಿನೋದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next