ಉತ್ತರ ಪ್ರದೇಶ: ಉತ್ತರ ಪ್ರದೇಶದ ಮುಜಾಫರ್‌ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಂದ ಸಹಪಾಠಿಯೊಬ್ಬರಿಗೆ ಕಪಾಳಮೋಕ್ಷ ಮಾಡುವಂತೆ ಆದೇಶಿಸಿದ ಘಟನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು “ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದಿರುವ ಪ್ರಕರಣ ಇದಾಗಿರುವುದರಿಂದ ಘಟನೆಯ ಹೊಣೆಗಾರಿಕೆಯನ್ನು ರಾಜ್ಯವೇ ಹೊರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಆಗಸ್ಟ್ 24 ರಂದು ಖುಬ್ಬಾಪುರ ಗ್ರಾಮದ ನೇಹಾ ಪಬ್ಲಿಕ್ ಶಾಲೆಯ ಶಿಕ್ಷಕಿ ತೃಪ್ತಿ ತ್ಯಾಗಿ ಇತರ ಮಕ್ಕಳಿಂದ ಮಗುವಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿರುವುದು ಗಮನಿಸಬೇಕಾದ ಸಂಗತಿ. ಅದರ ವಿಡಿಯೋ ವೈರಲ್ ಆದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಶಿಕ್ಷಕಿ ತೃಪ್ತಿ ತ್ಯಾಗಿ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕ್ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಮಗುವಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಗಳನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಧರ್ಮದ ಆಧಾರದಲ್ಲಿ ಮಗುವಿಗೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ 1 ವಾರದೊಳಗೆ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದೆ. ಅಲ್ಲದೆ, ಈ ಪ್ರಕರಣದಲ್ಲಿ ಯಾವ ಸೆಕ್ಷನ್‌ಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ನೋಡುವುದು ಆ ಐಪಿಎಸ್ ಅಧಿಕಾರಿಯ ಕೆಲಸವಾಗಿರುತ್ತದೆ. ಅಲ್ಲದೇ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಿ ಸಾಕ್ಷಿಗಳಿಗೆ ಭದ್ರತೆ ಒದಗಿಸಬೇಕು. ಸಂತ್ರಸ್ತ ಮಗುವಿನ ಶಿಕ್ಷಣವನ್ನು ಬೇರೆ ಶಾಲೆಯಲ್ಲಿ ಏರ್ಪಡಿಸಬೇಕು ಮತ್ತು ಕಪಾಳಮೋಕ್ಷ ಮಾಡಿದ ಎಲ್ಲ ಮಕ್ಕಳಿಗೆ ಕೌನ್ಸೆಲಿಂಗ್ ನೀಡಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಾಲಯವು ಶಿಕ್ಷಣ ಹಕ್ಕು ಕಾಯ್ದೆಯಡಿ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಇಷ್ಟಾದರೂ ಮಕ್ಕಳು ಮಾನ್ಯತೆ ಇಲ್ಲದ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗುತ್ತಿದೆ ಎಂದೂ ನ್ಯಾಯಾಲಯ ಹೇಳಿದೆ. ಶಿಕ್ಷಣ ಹಕ್ಕು ಕಾಯಿದೆಯನ್ನು ಉಲ್ಲೇಖಿಸಿದ ನ್ಯಾಯಾಧೀಶರ ಪೀಠ, ಯಾವುದೇ ಮಗು ಜಾತಿ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸಬಾರದು ಎಂದು ಹೇಳಿದೆ. ಈ ವಿಷಯದ ಮುಂದಿನ ವಿಚಾರಣೆ ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಇದನ್ನೂ ಓದಿ: Thothapuri 2; ಇದು ಎಲ್ಲರಿಗೂ ರುಚಿಸುವ ತೋತಾಪುರಿ: ನಟ ಜಗ್ಗೇಶ್ ಮಾತು