Advertisement
ಈ ಸಲಹೆಗಳನ್ನು ಪಾಲಿಸಿ :
Related Articles
Advertisement
ಪ್ರಧಾನ ಸ್ನಾಯುಗಳನ್ನು ಸದೃಢವಾಗಿ ಇರಿಸಿಕೊಳ್ಳಿ : ಪ್ರಧಾನ ಸ್ನಾಯುಗಳು (ಬೆನ್ನು ಮತ್ತು ಹೊಟ್ಟೆಯ ಭಾಗದ ಸ್ನಾಯುಗಳು) ದುರ್ಬಲವಾಗಿದ್ದರೆ ಬೆನ್ನಿಗೆ ಉತ್ತಮ ಆಧಾರ ದೊರಕದೆ ನೋವು ಮತ್ತು ಗಾಯ ಉಂಟಾಗುತ್ತದೆ. ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ನೆರವಾಗುವ ಸಾಮಾನ್ಯ ವ್ಯಾಯಾಮಗಳೆಂದರೆ ಯೋಗ ಮತ್ತು ಪೈಲೇಟ್‌ಗಳು. ಆದರೆ ಈ ವ್ಯಾಯಾಮಗಳನ್ನು ತೀವ್ರವಾಗಿ ಅಭ್ಯಾಸ ಮಾಡುವುದಕ್ಕೆ ಮುನ್ನ ಬೆನ್ನೆಲುಬು ತಜ್ಞರ ಜತೆಗೆ ಸಮಾಲೋಚಿಸುವುದು ಒಳಿತು.
ಒತ್ತಡ ಕಡಿಮೆ ಮಾಡಿಕೊಳ್ಳಿ : ಒತ್ತಡ ಮತ್ತು ಬೆನ್ನುನೋವಿಗೆ ನಿಕಟ ಸಂಬಂಧ ಇದೆ ಎನ್ನಲಾಗಿದೆ. ಒತ್ತಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಚಿಕಿತ್ಸಾ ತಜ್ಞರನ್ನು ಸಂಪರ್ಕಿಸಬೇಕಾಗಿ ಬಂದರೂ ವಿಶ್ರಾಮಕ ತಂತ್ರಗಳನ್ನು ಕಲಿತುಕೊಳ್ಳುವುದು ಮತ್ತು ಹೆಚ್ಚು ನಿಯಮಿತವಾಗಿ ವ್ಯಾಯಾಮ ಮಾಡುವುದು ಯಾವಾಗಲೂ ಹಿತಕರ. ಒತ್ತಡವನ್ನು ಸರಿಯಾಗಿ ನಿಭಾಯಿಸುವುದರಿಂದ ಬೆನ್ನುನೋವು ಉಂಟಾಗದಂತೆ ಕಾಪಾಡಿಕೊಳ್ಳಬಹುದು.
ಭಾರ ಎತ್ತುವುದು, ಬಾಗುವುದು ಮತ್ತು ವಿಸ್ತರಿಸುವ ವ್ಯಾಯಾಮ ಸಂದರ್ಭ ಸರಿಯಾದ ದೈಹಿಕ ಭಂಗಿ ಅನುಸರಿಸಿ : ಯಾವುದೇ ಭಾರವಾದ ವಸ್ತುವನ್ನು ಎತ್ತುವಾಗ ಅಥವಾ ಸರಿಸುವಾಗ ಯಾವಾಗಲೂ ಸುರಕ್ಷಿತವಾಗಿ ಮಾಡಿ. ಭಾರವನ್ನು ಹಂಚಿಕೊಳ್ಳಲು ಸಹಾಯ ಪಡೆಯಿರಿ. ಅತಿ ಭಾರವನ್ನು ಎತ್ತುವ ಬದಲು ತಳ್ಳಲು ಪ್ರಯತ್ನಿಸಿ. ಕೆಳಬೆನ್ನಿನ ಮೇಲೆ ಹೆಚ್ಚು ಹೊರೆ ಬೀಳುವುದನ್ನು ತಡೆಯಲು ವಸ್ತುವನ್ನು ದೇಹಕ್ಕೆ ಹತ್ತಿರವಾಗಿ ಹಿಡಿದೆತ್ತಿ ಹಾಗೂ ಎತ್ತುವಾಗ ಬೆನ್ನು ಮತ್ತು ತಲೆಯನ್ನು ನೇರವಾಗಿ ಇರಿಸಿಕೊಳ್ಳಿ
ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಉಪಯೋಗಿಸುವಾಗ ನಿಮ್ಮ ಭಂಗಿಯನ್ನು ಆಗಾಗ ಬದಲಾಯಿಸುತ್ತಿರಿ : ತಂತ್ರಜ್ಞಾನದ ಬಳಕೆಯಿಂದಾಗಿ ಈಗ ನಮ್ಮ ಬೆನ್ನೆಲುಬಿಗೆ ಹಾನಿ ಮಾಡಿಕೊಳ್ಳುವುದು ಬಹಳ ಸುಲಭವಾಗಿಬಿಟ್ಟಿದೆ! ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಮೇಲೆ ಕಣ್ಣುನೆಟ್ಟು ಹಗಲು ರಾತ್ರಿ ಒಂದೇ ಭಂಗಿಯಲ್ಲಿ ಕುಳಿತಿದ್ದರೆ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಒತ್ತಡ ಬಿದ್ದು ನೋವು ಉಂಟಾಗುತ್ತದೆ. 24 ತಾಸುಗಳ ಕಾಲ “ಕನೆಕ್ಟೆಡ್’ ಆಗಿರುವುದು ನಮ್ಮ ಜೀವನದ ಮೇಲೆಯೂ ಬಹಳ ಒತ್ತಡವನ್ನು ಉಂಟು ಮಾಡುತ್ತದೆ. ಡಿಜಿಟಲ್ ಗ್ಯಾಜೆಟ್‌ಗಳನ್ನು ಉಪಯೋಗಿಸುವಾಗ ಪರದೆಯನ್ನು ಕಣ್ಣಿನ ಮಟ್ಟದಲ್ಲಿ ಇರಿಸಿಕೊಂಡು ನೇರವಾಗಿ ಕುಳಿತುಕೊಳ್ಳಿ. ನಡುನಡುವೆ ಆಗಾಗ ಬೆನ್ನು ನೇರ ಮಾಡಿಕೊಳ್ಳುವುದು, ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ಭಂಗಿ ಬದಲಾಯಿಸುತ್ತಿರುವುದು ಬೆನ್ನುನೋವು ಮತ್ತು ಕುತ್ತಿಗೆ ಗಾಯ ಉಂಟಾಗದಂತೆ ತಡೆಯಲು ಅವಶ್ಯ.
ಎಲ್ಲವೂ ವಿವೇಚನಾಯುಕ್ತವಾಗಿರಲಿ! : ಕ್ರೀಡೆ ಅಥವಾ ಮನೆಗೆಲಸ – ಯಾವುದೇ ಆದರೂ ವಾರಾಂತ್ಯಗಳಲ್ಲಿ ಎದ್ದುಬಿದ್ದು ಎಲ್ಲವನ್ನೂ ಒಂದೇಟಿಗೆ ಮಾಡಿ ಮುಗಿಸುವ ಆತುರ ಸಲ್ಲದು. ಎಲ್ಲವನ್ನೂ ಎಲ್ಲ ದಿನಗಳಿಗೂ ಹಂಚಿಕೊಂಡು ಹಿತಮಿತವಾಗಿ ಮಾಡಬೇಕು. ಒಂದು ದಿನ ತಾಸುಗಟ್ಟಲೆ ವ್ಯಾಯಾಮ ಮಾಡುವುದಕ್ಕಿಂತ ಎಲ್ಲ ದಿನಗಳಿಗೆ ಹಂಚಿಹಾಕಿ ವಿಸ್ತರಣಾತ್ಮಕ, ಬಲವರ್ಧಕ ಮತ್ತು ನಿರ್ವಹಣಾತ್ಮಕ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದು ಉತ್ತಮ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಸೇವಿಸಿ, ತೂಕ ತಾಳಿಕೊಳ್ಳುವಂತಹ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ ಮತ್ತು ಸದೃಢ ಎಲುಬುಗಳೊಂದಿಗೆ ಆರೋಗ್ಯವಾಗಿರಿ.
ಡಾ| ಈಶ್ವರಕೀರ್ತಿ ಸಿ.
ಕನ್ಸಲ್ಟಂಟ್ ಸ್ಪೈನ್ ಸರ್ಜರಿ,
ಕೆಎಂಸಿ ಆಸ್ಪತ್ರೆ, ಮಂಗಳೂರು