ಹುಬ್ಬಳ್ಳಿ: ಅಹಿಂಸೆಯ ಅಗ್ರನಾಯಕ ಮಹಾವೀರನ ತತ್ವಮಿಮಾಂಸೆ ಕೇವಲ ಜೈನರಿಗಷ್ಟೇ ಅಲ್ಲ ಸಕಲ ಮಾನವ ಕುಲಕೋಟಿಗೂ ಅವಶ್ಯಕವಾಗಿದೆ ಎಂದು ಜಂಗಲ್‌ವಾಲೆ ಬಾಬಾ ಮುನಿಶ್ರೀ ಚಿನ್ಮಯಸಾಗರ ಮಹಾರಾಜ ಹೇಳಿದರು.
ಮಹಾವೀರ ತೀರ್ಥಂಕರರ ಜಯಂತಿ ಮಹೋತ್ಸವ ನಿಮಿತ್ತ ಶಾಂತಿನಾಥ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಮಹಾವೀರರ ತತ್ವಮಿಮಾಂಸೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದರು.
ಮಹಾವೀರ ಜಯಂತಿಯನ್ನು ದೇಶ-ವಿದೇಶಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾವೀರನ ತತ್ವವನ್ನು ನಾವೆಲ್ಲ ಅರಿತುಕೊಳ್ಳಬೇಕು. ಅಹಿಂಸೆಯ ಮಹತ್ವ ತಿಳಿಯಬೇಕು. ಮಹಾವೀರನ ತತ್ವ ದುಃಖವನ್ನು ನಿವಾರಣೆ ಮಾಡಿ ಸನ್ಮಾರ್ಗ ತೋರಿಸುತ್ತದೆ ಎಂದರು.
ನಾವು ಮಾಡಿದ ಕರ್ಮದ ಫಲ ನಾವು ಅನುಭವಿಸಲೇಬೇಕು. ಮನೆಯಲ್ಲಿ ಕುಟುಂಬದ ಸದಸ್ಯರಿಗೆ ಯಾರಿಗಾದರೂ ಮೈಯಲ್ಲಿ ಹುಷಾರಿರದಿದ್ದರೆ ಔಷಧ ನೀಡಬಹುದು. ಆರೈಕೆ ಮಾಡಬಹುದೇ ಹೊರತು ಅವರ ನೋವನ್ನು ಪಡೆಯಲಾಗುವುದಿಲ್ಲ. ಅವರ ನೋವನ್ನು ಅವರೇ ಅನುಭವಿಸಬೇಕು.
ನಾವು ಸತ್ಕರ್ಮಕ್ಕೆ ಒಳ್ಳೆಯ ಫಲ ಪಡೆಯುತ್ತೇವೆ ಎಂದರು. ಆಧುನಿಕ ಜೀವನಶೈಲಿ, ಕೃತ್ರಿಮ ಜೀವನ ದುಃಖಕ್ಕೆ ಕಾರಣವಾಗಿದೆ. ನಿರಂತರ ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ಊರಿಗೆ ಬರುತ್ತಿವೆ. ಜಗತ್ತಿನಲ್ಲಿ ಎಲ್ಲ ಜೀವಿಗಳಿಗೂ ಬದುಕಲು ಹಕ್ಕಿದೆ.
ಮಹಾವೀರ ಹೇಳಿದಂತೆ ನಾವು ಬದುಕಬೇಕು ಹಾಗೂ ಇತರ ಜೀವಿಗಳಿಗೂ ಬದುಕಲು ಬಿಡಬೇಕು ಎಂದು ಹೇಳಿದರು. ಶಾಂತಿನಾಥ ಹೋತಪೇಟೆ, ವಿಮಲ ತಾಳಿಕೋಟೆ, ರಾಜೇಂದ್ರ ಬೀಳಗಿ, ಆರ್.ಟಿ.ತವನಪ್ಪನವರ ಇದ್ದರು.