Advertisement

ಮಗೂನಾ? ಆಫೀಸ್ಸಾ?

06:00 AM Oct 10, 2018 | Team Udayavani |

ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು ಡೇ ಕೇರ್‌ ಬದಲಿಸಿದ್ದೂ ಆಯಿತು…

Advertisement

ತರಕಾರಿ ತರೋಣ ಎಂದು ಸಂತೆಗೆ ಹೋಗಿ ತರಕಾರಿಗಳನ್ನೆಲ್ಲ ಆರಿಸಿ ತೆಗೆದುಕೊಳ್ಳುತ್ತಿರುವಾಗ ಗೆಳತಿ ಚೈತ್ರಾ ಸಿಕ್ಕಿದಳು. ನನ್ನ ಶಾಲಾದಿನಗಳ ಗೆಳತಿ ಅವಳು. ಓದಿನಲ್ಲಿ ಬಹಳ ಮುಂದು. ಪರೀಕ್ಷೆ ಬಂತೆಂದರೆ ನಮ್ಮೊಂದಿಗೆ ಮಾತು ಕೂಡ ಆಡುತ್ತಿರಲಿಲ್ಲ. ಓದಿನಲ್ಲಿ ಅಷ್ಟು ಮುಳುಗುತ್ತಿದ್ದಳು. ಎಂಜಿನಿಯರಿಂಗ್‌ ಮುಗಿಸಿ, ಎಂ.ಎಸ್‌ ಮಾಡುತ್ತೇನೆಂದು ಮನೆಯಲ್ಲಿ ಹಠ ಹಿಡಿದು ಕುಳಿತು ಅದನ್ನೂ ಮಾಡಿ ಮುಗಿಸಿದ್ದಳು. ಎಂ.ಎಸ್‌. ಮುಗಿದ ನಂತರ ಕೇಳಬೇಕೇ? ಒಳ್ಳೆಯ ಕಂಪನಿಯಲ್ಲಿ ಉದ್ಯೋಗ, ಕೈತುಂಬಾ ಸಂಬಳ. ನಂತರ ಎರಡು ಮೂರು ವರ್ಷ ಮದುವೆಯ ಮಾತುಕತೆ ಎತ್ತದಂತೆ ಮನೆಯವರಿಗೆಲ್ಲ ಹೇಳಿದವಳು, ಮೂರು ವರ್ಷ ಚೆನ್ನಾಗಿ ದುಡಿದು ಅವಳಷ್ಟೇ ಓದಿ, ಸಂಪಾದಿಸುತ್ತಿರುವ ಹುಡುಗನನ್ನು ಮದುವೆಯಾದಳು. ನಂತರ ಎರಡು ಮೂರು ವರ್ಷ ಕೆಲಸದಲ್ಲಿ ಒಂದರ ಮೇಲೆ ಒಂದು ಬಡ್ತಿ ಸಿಗುತ್ತಿದ್ದ ಆಸೆಯ ಹಿಂದೆ, ಮಗುವಿನ ವಿಚಾರವನ್ನೇ ಮಾಡಲಿಲ್ಲ. ವಯಸ್ಸು ನಿಲ್ಲುತ್ತದೆಯೇ? ಮೂವತ್ತು ದಾಟಿತ್ತು! 

ಪೂರ್ಣಪ್ರಮಾಣದ ಅಮ್ಮ
ಕೊನೆಗೆ ಐದಾರು ವೈದ್ಯರ ಬಳಿ ಓಡಾಡಿ ಮಗು ಪಡೆದಳು. ಹೆರಿಗೆಯ ಆರು ತಿಂಗಳು ರಜೆ ಮುಗಿಸಿ, ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು ಡೇ ಕೇರ್‌ ಬದಲಿಸಿದ್ದೂ ಆಯಿತು. ಒಂದು ದಿನ ಡೇ ಕೇರ್‌ನ ಆಯಾ ನೋಡುವ ಧಾರಾವಾಹಿಯನ್ನೇ ಮನೆಯಲ್ಲೂ ಹಾಕುವಂತೆ ಮಗು ಹಠ ಹಿಡಿಯಿತು! ಇನ್ನೊಂದರಲ್ಲಿ ಮಗುವನ್ನು ಯಾರೋ ಒಬ್ಬ ಹೊಡೆಯುತ್ತಿದ್ದನಂತೆ.

   ಮಗುವಿನ ಹಿತಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ, ಯಾರ ಬಳಿಯೂ ಸಲಹೆ ಕೇಳದೇ ರಾಜೀನಾಮೆ ನೀಡಿ 3 ತಿಂಗಳ ನೋಟೀಸ್‌ ಮುಗಿದ ಮೇಲೆಯೇ ಎಲ್ಲರಿಗೂ ತಿಳಿಸಿದಳು. ತದನಂತರ ಅವಳು ಪೂರ್ಣ ಪ್ರಮಾಣದ ಗೃಹಿಣಿ. ಬೆಳಗ್ಗೆ ಎದ್ದು ಮಗುವನ್ನು ಪ್ಲೇ ಸ್ಕೂಲ್‌ಗೆ ಸಿದ್ಧಪಡಿಸಿ, ಪತಿಯನ್ನು ಆಫೀಸ್‌ಗೆ ಕಳುಹಿಸಿ, ಮಧ್ಯಾಹ್ನ ಮನೆಗೆ ಬಂದ ಪಾಪುಗೆ ಊಟ ಮಾಡಿಸಿ, ಮಲಗಿಸಿ, ಎದ್ದ ಮೇಲೆ ಅವನನ್ನು ಪಾರ್ಕ್‌ಗೆ ಆಟ ಆಡಲು ಕರೆದುಕೊಂಡು ಹೋಗುವುದು. ರಾತ್ರಿ ರುಚಿ ರುಚಿ ಅಡುಗೆ ಮಾಡಿ, ಮಗುವಿಗೆ ಊಟ ಮಾಡಿಸಿ, ಕಥೆ ಹೇಳುತ್ತಾ ಮಗುವನ್ನು ಮಲಗಿಸುವ ಅವಕಾಶ ಅವಳದಾಯಿತು.

ಪಾಕೆಟ್‌ ಮನಿ ಆಸೆಯೇತಕೆ?
ಚೈತ್ರಾಳ ಮುಖದಲ್ಲಿ ಅಂದಿನಿಂದ ಯಾವಾಗಲೂ ಮಂದಹಾಸ, ತೃಪ್ತಿ ಎದ್ದು ಕಾಣುತ್ತಿರುತ್ತದೆ. ಮನೆಯಲ್ಲಿ ಮಗುವಿನೊಂದಿಗೆ ಕಳೆದ ಸಮಯದಲ್ಲೇ ಜಾಸ್ತಿ ಆನಂದ ಸಿಗುತ್ತದೆ ಎನ್ನುವುದು ಅವಳ ಭಾವನೆ. ದುಡಿತದ ಅನಿವಾರ್ಯತೆ ಇದ್ದರೆ ಪರವಾಗಿಲ್ಲ. ಪತಿರಾಯನ ದುಡಿಮೆ ಚೆನ್ನಾಗಿದೆ. ಪಾಕೆಟ್‌ ಮನಿಗಾಗಿ ದುಡಿದು ಮಗುವಿನ ಪೋಷಣೆಯ ಹೊಣೆಯನ್ನು ಯಾರಿಗೋ ವಹಿಸಿ ಕೆಲಸದ ಒತ್ತಡದಲ್ಲಿ ಮಗುವಿನ ಕಡೆ ನಿರ್ಲಕ್ಷ್ಯ ತೋರಿದರೆ ಏನು ಪ್ರಯೋಜನ ಎನ್ನುತ್ತಾಳೆ. ಈಗ ಆಕೆಯ ಮಗ ಎರಡನೇ ತರಗತಿ ಓದುತ್ತಿದ್ದಾನೆ. ಅವಳು ಮನೆಯ ಪಕ್ಕದಲ್ಲೇ ಇರುವ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಸೇರಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ.

Advertisement

ಅವಕಾಶವಿದ್ದೇ ಇರುತ್ತೆ…
ಕಚೇರಿ ಕೆಲಸಕ್ಕೆ ಹೋಗಲು ನಿದ್ರೆ, ಊಟ ಉಪಹಾರಗಳನ್ನು ನಿರ್ಲಕ್ಷಿಸಿದರೆ ಆರೋಗ್ಯವೂ ಕೆಡುತ್ತದೆ. ಕೆಲಸದ ಒತ್ತಡದಲ್ಲಿ ಪತಿರಾಯನೊಂದಿಗೆ ಜಗಳ, ಮಗುವನ್ನು ಹೊಡೆದು ಬಡಿದು ಮಾಡುವವರೂ ಇದ್ದಾರೆ. ಮಗುವನ್ನು ಕೋಣೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುವ ತಾಯಂದಿರೂ ಕೆಲವರು. ತಮ್ಮ ಕೆಲಸವನ್ನು ಮಾಡಿಕೊಳ್ಳಲು ಮಗುವಿನ ಕೈಗೆ ಮೊಬೈಲ್‌ ನೀಡುವುದು, ಕಾರ್ಟೂನ್‌ ಇತ್ಯಾದಿ ಆಮಿಷಗಳ ಮೊರೆ ಹೋಗಿ ಕೆಲವು ತಾಯಂದಿರ ಕಥೆಯನ್ನು ಈಗಾಗಲೇ  ಕೇಳಿರಬಹುದು. ಮಕ್ಕಳನ್ನು ಆಯಾ, ಡೇ ಕೇರ್‌ ಎಂದು ಸೇರಿಸಿ ಈ ಕಡೆ ಕೆಲಸದಲ್ಲೂ ಆಸಕ್ತಿ ತೋರಲಾಗದೆ, ಆ ಕಡೆ ಮಕ್ಕಳ ಲಾಲನೆ ಪಾಲನೆಯಲ್ಲೂ ನ್ಯೂನತೆ ಉಂಟಾಗುವ ಸಂದರ್ಭಗಳಿಗಿಂತ ಮಗುವಿನ ಲಾಲನೆಗಾಗಿ ಅವಳು ತೆಗೆದುಕೊಂಡ ನಿರ್ಧಾರ ಸರಿಯೆನಿಸಿತು. 

 ಕೆಲಸಕ್ಕೆ ರಾಜೀನಾಮೆ ನೀಡಿದ ತಕ್ಷಣ ಪೂರ್ಣವಿರಾಮವೆಂದು ಭಾವಿಸಬೇಕೆಂದಿಲ್ಲ. ಮಗುವಿನ ಹಿತಾಸಕ್ತಿಗಾಗಿ ಕೆಲಸಕ್ಕೆ ಅಲ್ಪವಿರಾಮ ನೀಡಿ, ಮಗು ಶಾಲೆಗೆ ಹೋಗುವಾಗ, ಆ ಸಮಯದಲ್ಲಿ ಮಾಡುವ ಯಾವುದಾದರೂ ಕೆಲಸವನ್ನೋ, ಯಾವುದಾದರೂ ಸಣ್ಣಪುಟ್ಟ ವ್ಯವಹಾರವನ್ನೋ ಶುರುಮಾಡಿಕೊಳ್ಳಬಹುದು. ಹಿಂದೆ ಕೆಲಸ ಮಾಡಿದ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಆ ಕ್ಷೇತ್ರದಲ್ಲಿ ಮುಂದುವರಿಯಲೂಬಹುದು. ಮಗುವಿನ ಆರೈಕೆಗಾಗಿ ರಾಜೀನಾಮೆ ನೀಡಿದ ಮಹಿಳೆಯರಿಗೆ ಕೆಲವು ಕಂಪನಿಗಳು ಆದ್ಯತೆ ನೀಡಿ ಉದ್ಯೋಗ ನೀಡುತ್ತಿರುವುದನ್ನು ಗಮನಿಸಬಹುದು. 

– ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next