Advertisement

ಪೇದೆ ಮೇಲೆ ಮಚ್ಚು ಬೀಸಿದ ರೌಡಿಗೆ ಗುಂಡೇಟು!

12:37 PM Dec 04, 2017 | Team Udayavani |

ಬೆಂಗಳೂರು: ವಿಕಲಚೇತನನ ಮೇಲೆ ಹಲ್ಲೆ ನಡೆಸಿ, ಅವರ ಪುತ್ರನ ಸರ ಕತ್ತುಕೊಂಡು ಪರಾರಿಯಾಗಿದ್ದ ರೌಡಿಶೀಟರ್‌, ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಕೋಣನಕುಂಟೆ ಪೊಲೀಸರು ಶೂಟೌಟ್‌ ನಡೆಸಿ ಆತನನ್ನು ಬಂಧಿಸಿದ ಘಟನೆ ಕೊತ್ತನೂರು ದಿಣ್ಣೆ ಬಳಿ ನಡೆದಿದೆ.

Advertisement

ಕಲ್ಕೆರೆಯ ಸಂತೋಷ ಆಲಿಯಾಸ್‌ ಪಳನಿ (33) ಗುಂಡೇಟು ತಿಂದು ಬಂಧಿತನಾದ ರೌಡಿಶೀಟರ್‌. ಶನಿವಾರ ರಾತ್ರಿ 11.30ಕ್ಕೆ ಕೊತ್ತನೂರು ದಿಣ್ಣೆಯ ಸರ್ಕಾರಿ ಶಾಲೆ ಆವರಣದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನ್ನನ್ನು ಬಂಧಿಸಲು ಬಂದಾಗ ಆರೋಪಿಯು ಕಾನ್ಸ್‌ಟೆಬಲ್‌ ಕಿರಣ್‌ಕುಮಾರ್‌ರ ಎಡಗೈಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಈ ವೇಳೆ ದಾಳಿ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್‌, ಪಳನಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಿರಣ್‌ ಹಾಗೂ ಪಳನಿ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪಳನಿ ವಿರುದ್ಧ ಜೆ.ಪಿ.ನಗರ, ಹುಳಿಮಾವು ಠಾಣೆಯಲ್ಲಿ ದರೋಡೆ, ಬನ್ನೇರುಘಟ್ಟ ಠಾಣೆಯಲ್ಲಿ ವಿದ್ಯಾರ್ಥಿನಿ ಅಪಹರಣ, ತಿಲಕನಗರದಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಬನ್ನೇರುಘಟ್ಟ ಪ್ರಕರಣದಲ್ಲಿ ಆರೋಪಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಹಿಂದೆ ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಈತ, ಹೊರಬಂದ ನಂತರ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ. ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಆರಂಭಿಸಿದ ಪಳನಿ, ಇಲ್ಲೂ ತನ್ನ ರಕ್ತಚರಿತ್ರೆ ಮುಂದುವರಿಸಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ವಿಕಲಚೇತನನ ಮೇಲೆ ಹಲ್ಲೆ: ಶನಿವಾರ ರಾತ್ರಿ 8.30ಕ್ಕೆ ಕೊತ್ತನೂರು ದಿಣ್ಣೆ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಪಳನಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ. ಈತನ ಕೂಗಾಟದಿಂದ ಬೇಸತ್ತ ಪಕ್ಕ ಮನೆ ನಿವಾಸಿ ವೆಂಕಟೇಶ್‌ ಪ್ರಸಾದ್‌, ಕಟ್ಟಡದಿಂದ ಹೊರ ಹೋಗುವಂತೆ ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ.

ಆಗ ವೆಂಕಟೇಶ್‌ ಪ್ರಸಾದ್‌ ಹಾಗೂ ಇವರ ವಿಕಲಚೇತನ ತಂದೆ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ವೆಂಕಟೇಶ್‌ ಪ್ರಸಾದ್‌ ಬಳಿಯಿದ್ದ 16 ಗ್ರಾಂ ಚಿನ್ನದ ಸರ ಕಸಿದುಕೊಂಡು ಹೋಗಿದ್ದಾರೆ. ಈ ಸಂಬಂಧ ವೆಂಕಟೇಶ್‌ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸುತ್ತ ನಾಕಾಬಂದಿ ಹಾಕಿದ್ದರು.

ಶರಣಾಗುವಂತೆ ಎಚ್ಚರಿಸಿದರೂ ಮಚ್ಚು ಬೀಸಿದ: ಆರೋಪಿ ಪಳನಿ, ಜಂಬೂ ಸವಾರಿ ದಿಣ್ಣೆ ಬಳಿ ಇರುವ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಧರ್ಮೆಂದ್ರ ಮತ್ತು ತಂಡ, ಸ್ಥಳಕ್ಕೆ ತೆರಳಿದೆ. ರಸ್ತೆ ಬದಿ ಲಾಂಗ್‌ ಹಿಡಿದು ನಿಂತಿದ್ದ ಪಳನಿ, ಪೊಲೀಸ್‌ ಜೀಪ್‌ ಬರುತ್ತಿದ್ದಂತೆ ಜೀಪ್‌ಗೆ ಮಚ್ಚಿನಿಂದ ಹೊಡೆದಿದ್ದು, ಎಡಭಾಗದ ಗಾಜು ಪುಡಿಯಾಗಿದೆ.

ಒಂದು ಕ್ಷಣ ವಿಚಲಿತರಾದ ಪೊಲೀಸರು, ಜೀಪ್‌ ನಿಲ್ಲಿಸಿ ಆರೋಪಿಯ ಬೆನ್ನತ್ತಿದ್ದಾರೆ. ಈ ವೇಳೆ ಕೊತ್ತನೂರು ದಿಣ್ಣೆಯ ಸರ್ಕಾರಿ ಶಾಲೆ ಆವರಣ ಪ್ರವೇಶಿಸಿದ ಪಳನಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಆತ ಪೊಲೀಸರತ್ತ ಲಾಂಗ್‌ ಬೀಸಿದ್ದಾನೆ.

ಈ ವೇಳೆ ಪೇದೆ ಕಿರಣ್‌ಕುಮಾರ್‌ ಆರೋಪಿಯನ್ನು ಹಿಡಿಯಲು ಮುಂದಾದಾಗ ಮಚ್ಚಿನಿಂದ ಅವರ ಎರಡೂಗೆ ಹೊಡೆದಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಧರ್ಮೆಂದ್ರ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ತಮ್ಮತ್ತಲೇ ಆರೋಪಿ ಮಚ್ಚು ಬೀಸಿದಾಗ, ಆತ್ಮರಕ್ಷಣೆಗಾಗಿ ಪಿಐ ಧರ್ಮೇಂದ್ರ ಆರೋಪಿಯ ಎಡಗಾಲಿಗೆ ಗುಂಡು ಹೊಡೆದು, ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next