ಟ್ರಿನಿಡಾಡ್: ಐಸಿಸಿ ಟಿ20 ವಿಶ್ವಕಪ್ ತಯಾರಿ ಆರಂಭವಾಗಿದೆ. ಅಭ್ಯಾಸ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ಆಸ್ಟ್ರೇಲಿಯಾ ತಂಡವು ಮಂಗಳವಾರ ನಮೀಬಿಯಾ ವಿರುದ್ಧ ಜಯ ಗಳಿಸಿದೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಆಟಗಾರರ ಕೊರತೆಯ ಕಾರಣ ಕೋಚ್ ಮತ್ತು ಆಯ್ಕೆಗಾರರ ಮಂಡಳಿ ಮುಖ್ಯಸ್ಥರು ಫೀಲ್ಡಿಂಗ್ ಮಾಡಿದ್ದು ವಿಶೇಷ.
ಆಸ್ಟ್ರೇಲಿಯ ಲೈನ್-ಅಪ್ ನ ಕೆಲ ಆಟಗಾರರು ತಂಡ ಕೂಡಿಕೊಂಡಿಲ್ಲ ಗ್ಲೆನ್ ಮ್ಯಾಕ್ಸ್‌ವೆಲ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಐಪಿಎಲ್ ಪ್ಲೇಆಫ್‌ಗಳ ಭಾಗವಾಗಿದ್ದ ಕಾರಣ ವಿಶ್ರಾಂತಿ ಸಮಯ ಬಯಸಿದ್ದಾರೆ. ನಾಯಕ ಮಾರ್ಶ್ ಕೂಡಾ ಗಾಯಗೊಂಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಮಾರ್ಶ್, ಅಭ್ಯಾಸ ಪಂದ್ಯಕ್ಕಿಂತ ಆಸ್ಟ್ರೇಲಿಯಾ ಆಟಗಾರರ ವಿರಾಮಕ್ಕೆ ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.
ಆಸೀಸ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ- ಮಾಜಿ ನಾಯಕ 41 ವರ್ಷದ ಜಾರ್ಜ್ ಬೈಲಿ, ಮುಖ್ಯ ಕೋಚ್ ಆ್ಯಂಡ್ರ್ಯೂ ಮೆಕ್ ಡೊನಾಲ್ಡ್ (42 ವರ್ಷ), ಫೀಲ್ಡಿಂಗ್ ಕೋಚ್ ಆಂಡ್ರೆ ಬೊರೊವೆಕ್ (46 ವರ್ಷ) ಮತ್ತು ಬ್ಯಾಟಿಂಗ್ ಕೋಚ್ ಬ್ರಾಡ್ ಹಾಡ್ಜ್ (49 ವರ್ಷ) ಸಂಪೂರ್ಣ 20 ಓವರ್ ಗಳ ಕಾಲ ಫೀಲ್ಡಿಂಗ್ ಮಾಡಿದ್ದಾರೆ.
12ನೇ ಓವರ್‌ನಲ್ಲಿ 50 ರನ್ ಗೆ ಆರು ವಿಕೆಟ್ ಉರುಳಿದ್ದರೂ ನಮೀಬಿಯಾವನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಲಿಲ್ಲ. ಝೇನ್ ಗ್ರೀನ್, ಮಲನ್ ಕ್ರುಗರ್ ಮತ್ತು ಡೇವಿಡ್ ವೀಸ್ ಅವರ ಸಹಾಯದಿಂದ ನಮೀಬಿಯಾ 20 ಓವರ್‌ಗಳಲ್ಲಿ 119/9 ಗಳಿಸಿತು. ಜೋಶ್ ಹೇಜಲ್ ವುಡ್ ಅವರು ನಾಲ್ಕು ಓವರ್ ಗಳಲ್ಲಿ ಕೇವಲ ಐದು ರನ್ ನೀಡಿ ಎರಡು ವಿಕೆಟ್ ಕಿತ್ತರು. ನಾಲ್ಕರಲ್ಲಿ ಮೂರು ಮೇಡನ್ ಓವರ್.
ಆಸ್ಟ್ರೇಲಿಯಾ ಕೇವಲ 10 ಓವರ್ ಗಳಲ್ಲಿ ಗುರಿ ಬೆನ್ನತ್ತಿತು. ಡೇವಿಡ್ ವಾರ್ನರ್ 21 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು.