ಸಂಜೆ ಆರು ಗಂಟೆ ದಾಟಿತ್ತು. ಪಶ್ಚಿಮ ದಿಕ್ಕು ಕೆಂಪಾಗಿತ್ತು. ಸೂರ್ಯಾಸ್ತ ನೋಡಲು ತೆರಳಿದ್ದ ಸೋನು, ರೀಟಾ, ವಾಣಿ, ಮೀನಾ ಎಲ್ಲರೂ ಮಾತನಾಡುತ್ತಾ ಗುಡ್ಡದ ಮೇಲೆ ಸಾಗುತ್ತಿದ್ದರು. ಆಕಾಶದಿಂದ ಧರೆಗೆ ಮಿಂಚೊಂದು ಹರಿಯಿತು. ಅದನ್ನು ಕಂಡು ಮಕ್ಕಳೆಲ್ಲರೂ ಒಂದು ಕ್ಷಣ
ಹೆದರಿದರು. ಮಿಂಚು ಹರಿದ ಪ್ರದೇಶದಲ್ಲಿ ಬಂಗಾರದ ಕಣ್ಣಿನ ಹುಡುಗಿಯೊಬ್ಬಳು ಕಾಣಿಸಿದಳು. ಅವಳ ಮೈ ಬೆಳಕಿನಿಂದ ಹೊಳೆಯುತ್ತಿತ್ತು.
ಮಕ್ಕಳನ್ನು ಕಂಡು ಆ ಮಿಂಚಿನ ಹುಡುಗಿ ಹೇಳಿದಳು, “ಹೆದರಬೇಡಿ, ನಾನು ನಿಮ್ಮ ಗೆಳತಿ. ನಾನು ಬೇರೆ ಗ್ರಹದಿಂದ ಬಂದಿದ್ದೇನೆ. ನಿಮ್ಮನ್ನು ನನ್ನ ಲೋಕಕ್ಕೆ ಕರೆದೊಯ್ಯಬೇಕೆಂದು ಬಂದಿದ್ದೇನೆ. ನನ್ನ ಜೊತೆ ಬರ್ತೀರಾ? ನಾಳೇನೆ ನಿಮ್ಮನ್ನು ವಾಪಸ್ ಕಳಿಸ್ತೇನೆ’ ಎಂದಳು. ಅದಕ್ಕೆ ವಾಣಿ, “ಅರೆ! ನಾವು ನಿಮ್ಮ ಲೋಕ ತಲುಪೋದು ಹೇಗೆ?’ ಎಂದು ಕೇಳಿದಳು. ಮಿಂಚಿನ ಹುಡುಗಿ ನಾಲ್ವರ ತಲೆ ಮೇಲೂ ಕೈಯಿಟ್ಟು ಮಂತ್ರವೊಂದನ್ನು ಗುನುಗಿದಳು. ಎಲ್ಲರಿಗೂ ಬೆನ್ನ ಹಿಂದೆ ರೆಕ್ಕೆ ಮೂಡಿದವು. ವೇಷಭೂಷಣ ಬದಲಾದವು. ಎಲ್ಲರೂ ಸೇರಿ ಬಾನಿನಲ್ಲಿ ಹಾರಿದರು.
ವಿಸ್ಮಯ ಲೋಕ ನೋಡಿದ ಮಕ್ಕಳು ಮೂಕ ವಿಸ್ಮಿತರಾದರು. ಅಲ್ಲಿನ ಗಿಡಮರಗಳು ಮಾತನಾಡುತ್ತಿದ್ದವು. ಪ್ರಾಣಿ-ಪಕ್ಷಿಗಳು ಕೆಲಸ ಮಾಡುತ್ತಿದ್ದವು. ಬಂಗಾರದ ಮನೆಗಳಿದ್ದವು. ಹಾಲಿನ ಹೊಳೆ ಹರಿಯುತ್ತಿತ್ತು. ಸಮುದ್ರದ ನೀರು ಸಿಹಿಯಾಗಿತ್ತು. ಪ್ರತಿಯೊಬ್ಬರೂ ಅನ್ಯೋನ್ಯವಾಗಿದ್ದರು. ಮಕ್ಕಳೆಲ್ಲ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದರು. ಇದೆಲ್ಲವನ್ನೂ ನೋಡಿ ವಾಣಿಗೆ ಭೂಮಿಗೆ ವಾಪಸ್ಸಾಗಲು ಮನಸ್ಸೇ ಬರಲಿಲ್ಲ.
ಆದರೂ ಭಾರವಾದ ಮನಸ್ಸಿನಿಂದ ಅವಳು ಭೂಮಿಗೆ ಹಿಂದಿರುಗಲು ಅಣಿಯಾದಳು. ಹೊರಡುವ ಮುನ್ನ ಮಿಂಚಿನ ಹುಡುಗಿ ವಾಣಿಗೆ ಆಟಿಕೆಯೊಂದನ್ನು ಕೊಟ್ಟಳು. ಅದು ಟ್ರಿಣ್ ಟ್ರಿಣ್ ಟ್ರಿಣ್ ಶಬ್ದ ಮಾಡುತ್ತಿತ್ತು. ವಾಣಿಗೆ ಆಟಿಕೆಯ ಟ್ರಿಣ್ ಟ್ರಿಣ್ ಶಬ್ದದೊಂದಿಗೆ ಅಮ್ಮನ ದನಿಯೂ ಕೇಳಿಸಿತು. ಅಮ್ಮ “ಏಳು ವಾಣಿ ಶಾಲೆಗೆ ತಡ ಆಯ್ತು’ ಎನ್ನುತ್ತಿದ್ದರು. ನಿದ್ದೆಯಿಂದೆಚ್ಚರವಾದ ವಾಣಿ, ದಡಕ್ಕನೆ ಹಾಸಿಗೆಯಿಂದೆದ್ದಳು. ತಾನು ಕಂಡ ಕನಸು ಎಷ್ಟು ಸುಂದರವಾಗಿತ್ತು ಎಂದುಕೊಂಡೇ ಶಾಲೆಗೆ ಹೊರಟಳು.
– ಅಶೋಕ ಬಳ್ಳಾ