ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪೆನಿಯಾಗಿರುವ ಹಿಂಡನ್‌ಬರ್ಗ್ ಶನಿವಾರ ಬಹಿರಂಗ ಪಡಿಸಿರುವ ವರದಿ ಈಗ ಕೇವಲ ಭಾರತ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಿಂಡನ್‌ಬರ್ಗ್‌ನ ಈ ವರದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳು ಆರಂಭ ವಾಗಿದ್ದರೆ, ರಾಜಕೀಯ ಕೆಸರೆರಚಾಟವೂ ಬಿರುಸಿನಿಂದ ಸಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಕೇವಲ ಹಿಂಡನ್‌ಬರ್ಗ್ ಮತ್ತು ಅದಾನಿ ಸಮೂಹದ ನಡುವಣ ಸಮರವಾಗಿರದೆ ಭಾರತೀಯ ಮಾರುಕಟ್ಟೆಗೆ ಆ ಮೂಲಕ ದೇಶದ ಸದೃಢ ಆರ್ಥಿಕತೆಗೆ ಹಿನ್ನಡೆ ಉಂಟುಮಾಡುವ ಷಡ್ಯಂತ್ರ ಇದರಲ್ಲಿ ಅಡಗಿದೆಯೋ ಎಂಬ ಅನುಮಾನಗಳೂ ವ್ಯಕ್ತವಾಗಿದೆ.
ಭಾರತದ ಕಾರ್ಪೊರೇಟ್ ದಿಗ್ಗಜ ಕಂಪೆನಿಯಾಗಿರುವ ಅದಾನಿ ಸಮೂಹವನ್ನು ಗುರಿಯಾಗಿಸಿ ಕಳೆದ ವರ್ಷದ ಜನವರಿಯಲ್ಲಿ ಹಲವು ಆರೋಪಗಳ ವರದಿಯೊಂದನ್ನು ಹಿಂಡನ್‌ಬರ್ಗ್ ಬಿಡುಗಡೆ ಮಾಡಿದ್ದಾಗ ಅದಾನಿ ಸಮೂಹ ಕಂಪೆನಿಗಳ ಷೇರುಗಳು ಭಾರೀ ಹಿನ್ನಡೆ ಕಂಡಿದ್ದವು. ಆರೋಪಗಳ ಕುರಿತಂತೆ ತನಿಖೆ ನಡೆಸಿದ್ದ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಬಿ, ಹಿಂಡನ್‌ಬರ್ಗ್‌ನ ವರದಿಯಲ್ಲಿ ಮಾಡಲಾಗಿರುವ ಆರೋಪಗಳನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಅದಾನಿ ಸಮೂಹಕ್ಕೆ ಕ್ಲೀನ್‌ಚಿಟ್ ನೀಡಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲೂ ಕಾನೂನು ಸಮರ ನಡೆಯುತ್ತಿದೆ. ತೀರ್ಪು ಬರಬೇಕಷ್ಟೇ. ಇದೇ ವೇಳೆ ಹಿಂಡನ್‌ಬರ್ಗ್ ಅಮೆರಿಕದಲ್ಲಿ ನಡೆಸಿದೆ ಎನ್ನಲಾಗಿರುವ ಅಕ್ರಮಗಳ ಬಗೆಗೆ ಸೆಬಿ ತನ್ನ ಈ ಹಿಂದಿನ ತನಿಖಾ ವರದಿಯಲ್ಲಿ ಬೆಟ್ಟು ಮಾಡಿತ್ತು. ಇದರಿಂದ ವಿಚಲಿತವಾಗಿರುವಂತೆ ಕಂಡುಬಂದಿರುವ ಹಿಂಡನ್‌ಬರ್ಗ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಬಿಯ ಮುಖ್ಯಸ್ಥರು ಮತ್ತು ಅದಾನಿ ಕುಟುಂಬದ ಕಂಪೆನಿಗಳೊಂದಿಗಿನ ನಂಟಿನ ಕುರಿತು ಬಲುದೊಡ್ಡ ಆರೋಪವನ್ನು ಮಾಡಿದೆ.
ಹಿಂಡನ್‌ಬರ್ಗ್ ವರದಿಯಲ್ಲಿ ಕೆಲವು ಮಹತ್ವದ ವಿಷಯಗಳನ್ನು ಪ್ರಸ್ತಾವಿಸಲಾಗಿದೆ ಯಾದರೂ ಯಾವುದೇ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿಲ್ಲ. ಕಳೆದ ಬಾರಿಯೂ ಗಾಳಿಯಲ್ಲಿ ಗುಂಡು ಹೊಡೆಯುವ ತೆರನಾಗಿ ಅದಾನಿ ಸಮೂಹದ ಸಾಗರೋತ್ತರ ಕಂಪೆನಿಗಳ ವಿರುದ್ಧ ಆರೋಪಗಳನ್ನು ಮಾಡಿತ್ತೇ ವಿನಾ ಅವುಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸಿರಲಿಲ್ಲ. ಈ ಕಾರಣದಿಂದಾಗಿಯೇ ಹಿಂಡನ್‌ಬರ್ಗ್‌ಗೆ ಈ ವರದಿ ತಿರುಗುಬಾಣವಾಗಿ ಪರಿಣಮಿಸಿದ್ದೇ ಅಲ್ಲದೆ ಅದರ ಒಂದಿಷ್ಟು ಅಕ್ರಮಗಳು ಬಯಲಿಗೆ ಬರುವಂತಾಗಿತ್ತು.
ಈ ಬಾರಿಯೂ ಹಿಂಡನ್‌ಬರ್ಗ್ ವರದಿಯಲ್ಲಿ ಅಂತೆಕಂತೆಗಳ ಪುರಾಣವನ್ನೇ ಹೆಣೆಯಲಾಗಿದ್ದು ಯಾವೊಂದೂ ಸ್ಪಷ್ಟ ದಾಖಲೆ, ಸಾಕ್ಷ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಇದೇ ಕಾರಣವನ್ನು ಮುಂದಿಟ್ಟು ಭಾರತ ಮತ್ತು ಜಾಗತಿಕ ಮಟ್ಟದ ಮಾರುಕಟ್ಟೆ ತಜ್ಞರು, ವಿಶ್ಲೇಷಕರು ಅದಾನಿ ಸಮೂಹ ಮತ್ತು ಸೆಬಿ ಮುಖ್ಯಸ್ಥರ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಬೆಳವಣಿಗೆಯನ್ನು ಗಮನಿಸಿದಾಗ ಇಡೀ ಪ್ರಕರಣದ ಹಿಂದೆ ಭಾರತೀಯ ಮಾರುಕಟ್ಟೆ ಮತ್ತು ಆರ್ಥಿಕತೆಗೆ ಹಿನ್ನಡೆ ಉಂಟು ಮಾಡುವ ಹಾಗೂ ಹಣಕಾಸು ವ್ಯವಹಾರ, ಮಾರುಕಟ್ಟೆ ನಿರ್ವಹಣೆಯಲ್ಲಿ ಅತ್ಯಂತ ಸಶಕ್ತವಾಗಿ ಮುನ್ನಡೆಯುತ್ತಿರುವ ಸೆಬಿ ಮತ್ತು ಆರ್‌ಬಿಐಗೆ ಕಳಂಕ ಉಂಟುಮಾಡುವ ಪ್ರಯತ್ನದಂತೆ ಗೋಚರ ವಾಗುತ್ತಿದೆ. ಇದು ಕೇವಲ ಅದಾನಿ ಕುಟುಂಬ, ಸೆಬಿ ಮುಖ್ಯಸ್ಥರ ಚಾರಿತ್ರ್ಯಹನನದ ಕಾರ್ಯ ಮಾತ್ರವಲ್ಲದೆ ಭಾರತದ ಹೆಸರಿಗೂ ಮಸಿ ಬಳಿಯುವ ಪ್ರಯತ್ನದಂತೆ ಭಾಸವಾಗುತ್ತಿರುವುದರಿಂದ ಕೇಂದ್ರ ಸರಕಾರ ಈ ಪ್ರಕರಣವನ್ನು ಒಂದಿಷ್ಟು ಗಂಭೀರವಾಗಿ ಪರಿಗಣಿಸಿ, ಹಿಂಡನ್‌ಬರ್ಗ್ ವರದಿಯ ಸಮಗ್ರ ಪರಾಮರ್ಶೆಯ ಜತೆಯಲ್ಲಿ ಆ ಕಂಪೆನಿಯ ಹಿನ್ನೆಲೆ, ವ್ಯವಹಾರ, ನಂಟಿನ ಕುರಿತಂತೆ ವಿಸ್ತೃತ ತನಿಖೆ ನಡೆಸಿ ಇಡೀ ಷಡ್ಯಂತ್ರವನ್ನು ಬಯಲು ಮಾಡಬೇಕು.