ದ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ (1958)
ನಿರ್ದೇಶನ: ಜಾನ್ ಸ್ಟರ್ಗ್ಸ್
ಅವಧಿ: 87 ನಿಮಿಷ
ಸುಪ್ರಸಿದ್ಧ ಕಾದಂಬರಿಕಾರ ಅರ್ನೆಸ್ಟ್ ಹಮ್ಮಿಂಗ್ವೇಯ “ದಿ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ’ ಕತೆಯನ್ನು ದೃಶ್ಯರೂಪದಲ್ಲಿ ಮೂಡಿಸಿದ ಸಿನಿಮಾ ಇದು. ತನ್ನ ವೃತ್ತಿಯನ್ನು ಬಿಟ್ಟಿರಲಾಗದ, ವೃದ್ಧ ಬೆಸ್ತನೊಬ್ಬನ ಕತೆ. 85ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ, ಕ್ಯೂಬಾದ ಮುದುಕ ಮೀನುಗಾರ ಮತ್ತು ಜ್ಯಾಬ್ಬಿ ಎಂಬ ತರುಣನ ಸುತ್ತ ಈ ಕತೆ ಸಾಗುತ್ತದೆ.
ವೃದ್ಧಾಪ್ಯದ ಕಾರಣ 84 ದಿನಗಳಿಂದ ಆತ ಮೀನು ಹಿಡಿದಿರುವುದಿಲ್ಲ. ‘ಇನ್ನು ನಿನ್ನ ಕೈಯಿಂದ ಮೀನು ಹಿಡಿಯಲು ಸಾಧ್ಯವೇ ಇಲ್ಲ’ ಎಂದು ಸುತ್ತಮುತ್ತಲಿನ ಜನರು ಆಡಿಕೊಂಡಾಗ, ಮುದುಕನಿಗೆ ಕೊಂಚ ಅವಮಾನವಾಗುತ್ತದೆ. ಆಗಿದ್ದಾಗಲಿ. ಒಂಟಿಯಾಗಿ ಸಮುದ್ರಕ್ಕೆ ಇಳಿದು, ದೊಡ್ಡ ಮೀನನ್ನೇ ಹಿಡಿದು, ಇವರಿಗೆಲ್ಲ ತೋರಿಸಬೇಕು ಎಂದು ಹಠಕ್ಕೆ ಬೀಳುವ ಮುದುಕನಿಗೆ ಸಿಗುವುದು ಜ್ಯಾಬ್ಬಿಯ ಪ್ರೋತ್ಸಾಹ ಮಾತ್ರ.
ಒಂದು ಪುಟ್ಟ ದೋಣಿ ಹಿಡಿದು ಸಮುದ್ರದಲ್ಲಿ ಒಬ್ಬಂಟಿಯಾಗಿ ಬಲು ದೂರ ಕ್ರಮಿಸಿದಾಗ, ಒಂದು ದೊಡ್ಡ ಮರ್ಲಿನ್ ಮೀನು ಗಾಳಕ್ಕೆ ಬೀಳುತ್ತದೆ. ಅದನ್ನು ದೋಣಿಯ ಹಿಂಬದಿ ಎಳೆದುಕೊಂಡು, ಮೂರು ರಾತ್ರಿ- ಮೂರು ಹಗಲು, ಮೀನಿನೊಂದಿಗೆ ಹೋರಾಟ ಮಾಡಿಕೊಂಡು, ದಡಕ್ಕೆ ತರುವ ಆತನ ಸಾಹಸವೇ ಒಂದು ರೋಮಾಂಚನ.
ಈ ನಡುವೆ ಶಾರ್ಕ್‌ಗಳು ದಾಳಿ ಮಾಡಿ, ಮರ್ಲಿನ್ ಮೀನನ್ನು ತಿನ್ನಲು ಯತ್ನಿಸುತ್ತವೆ. ಆ ಬೃಹತ್ ಮೀನನ್ನು ಮುದುಕ ದಡಕ್ಕೆ ಎಳೆತಂದಾಗ, ಅದರ ಅಸ್ಥಿಪಂಜರ ಮಾತ್ರ ಇರುತ್ತದೆ. ಆ ಅಲೆಗಳ ಆರ್ಭಟ, ಶಾರ್ಕ್‌ಗಳ ದಾಳಿಯಿಂದ, ಮೀನಿನ ಜೊತೆಗೆ ತನ್ನನ್ನೂ ರಕ್ಷಿಸಿಕೊಂಡು ಬರುವ ಮುದುಕ, ತನ್ನನ್ನು ಹಂಗಿಸಿದ ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸುತ್ತಾನೆ.