ಶಿರಸಿ: ಕಳೆದೆರಡು ವಾರಗಳಿಂದ ಗ್ರಾಮೀಣ ಭಾಗಕ್ಕೂ ವ್ಯಾಪಿಸಿರುವ ಕೋವಿಡ್ ಸೋಂಕಿಗಿಂತ ಹೆಚ್ಚಾಗಿ ಸುಳ್ಳು ಸುದ್ದಿಗಳ ಹಾವಳಿಗಳೇ ಹಳ್ಳಿಗರ ತಲೆನೋವಿಗೆ ಕಾರಣವಾಗಿದ್ದನ್ನು ಕೇಂದ್ರೀಕರಿಸಿ ತಯಾರಾಗಿರುವ ಕಿರು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ತಾಲೂಕಿನ ಓಣಿಕೇರಿ ಸಮೀಪದ ಜಾಡಿಮನೆಯ ಪ್ರಸಾದ ಹೆಗಡೆ ನೇತೃತ್ವದಲ್ಲಿ ತಯಾರಾದ 9 ನಿಮಿಷಗಳ ಕಿರುಚಿತ್ರ ಹವ್ಯಕ ಕನ್ನಡ ಸಂಭಾಷಣೆಯನ್ನೊಳಗೊಂಡಿದೆ. ಕೋವಿಡ್ ಅವಾಂತರ ಶೀರ್ಷಿಕೆಯ ಕಿರುಚಿತ್ರವನ್ನು ವಾರಗಳ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ನೆಟ್ಟಿಗರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಅಶ್ವತ್ಥ ಕಟ್ಟೆ, ಡೇರಿ ಹಾಗೂ ಶಾಲೆ ಕಟ್ಟೆಗಳಲ್ಲಿ ಗ್ರಾಮಸ್ಥರು ಒಟ್ಟಾಗಿ ಕುಳಿತು ಲೋಕಾಭಿರಾಮ ಸಂಗತಿಗಳನ್ನು ಚರ್ಚಿಸುತ್ತಾರೆ. ಅದರಂತೆ ಕಳೆದೆರಡು ತಿಂಗಳುಗಳಿಂದ ಕೋವಿಡ್ ಕುರಿತ ಮಾತುಕತೆಯೆ ಹೆಚ್ಚಾಗಿದೆ. ಆದರೆ, ಈಚೆಗೆ ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿರುವ ಕೋವಿಡ್ ಸೋಂಕಿನ ಕುರಿತು ಮಾಧ್ಯಮಗಳಲ್ಲಿ ಎಲ್ಲಿಯೂ ಬಾರದ ಇಲ್ಲಸಲ್ಲದ ಸುಳ್ಳು ಸುದ್ದಿಗಳು ಎಲ್ಲೆಡೆಯಲ್ಲಿ ಕೇಳಿಬರುತ್ತಿದೆ. ನಾಲ್ಕೈದು ದಿನಗಳು ಕಳೆದ ನಂತರ ಸತ್ಯದ ಅರಿವಾಗಿ ಪೆಚ್ಚು ಮೋರೆ ಹಾಕುವ ಪರಿಸ್ಥಿತಿ ಹಳ್ಳಗಳಲ್ಲಿ ಸೃಷ್ಟಿಯಾಗಿದೆ. ಇಂತಹ ಸುಳ್ಳು ಸುದ್ದಿಗಳಿಂದ ಉಂಟಾಗುವ ತೊಂದರೆ, ಗೊಂದಲಗಳನ್ನು ಕೇಂದ್ರೀಕರಿಸಿ ಹವ್ಯಕ ಸಂಭಾಷಣೆಯೊಂದಿಗೆ ಮೊಬೈಲ್ ಕ್ಯಾಮೆರಾ ಮೂಲಕವೇ ಕೋವಿಡ್ ಅವಾಂತರ ಕಿರುಚಿತ್ರ ಮಾಡಲಾಗಿದೆ. ಜಾಡಿಮನೆಯ ಸುಮಾರು ಹತ್ತಕ್ಕೂ ಅಧಿಕ ಮಂದಿ ಕಿರುಚಿತ್ರದಲ್ಲಿ ದನಿಗೂಡಿಸಿದ್ದಾರೆ.
ಮೈಸೂರಿನಲ್ಲಿ ಸದ್ಯ ಮೆಕ್ಯಾನಿಕಲ್ ಇಂಜಿನಿಯರ್ ಓದುತ್ತಿರುವ ಜಾಡಿಮನೆಯ ಸುಬ್ರಾಯ ಹಾಗೂ ಲಕ್ಷ್ಮೀ ಹೆಗಡೆ ದಂಪತಿ ಪುತ್ರ ಪ್ರಸಾದ ಹೆಗಡೆ ಕೋವಿಡ್ ಪರಿಣಾಮ ನಾಲ್ಕು ತಿಂಗಳ ಹಿಂದೆಯೆ ಮನೆ ಸೇರಿದ್ದಾರೆ. ಬೇಸಿಗೆಯಲ್ಲಿ ಗಡಿ ಕೆಲಸ ಮುಗಿಸಿ ಮಳೆಗಾಲದಲ್ಲಿ ಬೇಸರ ಕಳೆಯಲೆಂದು ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಂದು ವಾರದೊಳಗೆ ಚಿತ್ರೀಕರಣ ಮಾಡಿ ಎಡಿಟಿಂಗ್ ಮಾಡಲಾಗಿದ್ದು, ಪ್ರಸಾದ ಹೆಗಡೆ ಸಹೋದರ ಉತ್ತಮ ಹೆಗಡೆ ಛಾಯಾಗ್ರಹಣಕ್ಕೆ ಸಹಕರಿಸಿದ್ದಾರೆ. ಯೂಟ್ಯೂಬ್ ಲಿಂಕ್
https://youtu.be/haJKdjtneRM ಮೂಲಕ ಕಿರುಚಿತ್ರ ನೋಡಬಹುದಾಗಿದೆ.
ಕೋವಿಡ್ ಕುರಿತ ಸುದ್ದಿಗಳನ್ನು ಮತ್ತೂಮ್ಮೆ ಪರಾಮರ್ಷಿಸಿ ಇತರರಿಗೆ ಸತ್ಯ ಸಂಗತಿಯನ್ನು ಮಾತ್ರ ತಿಳಿಸುವಂತೆ ಕಿರುಚಿತ್ರ ಹೇಳುತ್ತದೆ. ಅಂತೆ-ಕಂತೆಗಳ ಮಾತಿನಿಂದ ಉಂಟಾಗುವ ಗೊಂದಲ, ತೊಂದರೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಂಜಿನಿಯರಿಂಗ್ ಆನ್ ಲೈನ್ ತರಗತಿ ಇದ್ದರೂ ನೆಟÌರ್ಕ್ ಸಮಸ್ಯೆಯಿಂದ ತರಗತಿಗೆ ಕೂರಲಾಗಿಲ್ಲ. ಅದಕ್ಕಾಗಿಯೇ ಕಿರುಚಿತ್ರ ನಿರ್ಮಾಣದತ್ತ ಚಿತ್ತ ಹರಿಸಿದೆ.
-ಪ್ರಸಾದ ಹೆಗಡೆ, ಜಾಡಿಮನೆ