ಈಗಾಗಲೇ ಯಶಸ್ಸು ಕಂಡ “ಫಸ್ಟ್ ರ್‍ಯಾಂಕ್ ರಾಜು’ ಮತ್ತು “ರಾಜು ಕನ್ನಡ ಮೀಡಿಯಂ’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಶ್ವಿನ್ ಕೊಡಂಗಿ ಈಗ ನಿರ್ದೇಶಕರಾಗಿದ್ದಾರೆ. “ಸ್ವಾರ್ಥರತ್ನ’ ಚಿತ್ರದ ಮೂಲಕ ಅವರು ನಿರ್ದೇಶಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ನಿರ್ದೇಶಕರು ಇಲ್ಲೂ ಹೊಸ ಪ್ರತಿಭೆಗಳನ್ನೇ ಕಟ್ಟಿಕೊಂಡು ಗಾಂಧಿನಗರದ ಅಂಗಳಕ್ಕೆ ಜಿಗಿದಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಅಶ್ವಿನ್ ಕೊಡಂಗಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಟ್ರೇಲರ್ ನೋಡಿದವರಿಗೆ ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಒಂದು ಚಿಕ್ಕ ತಂಡವನ್ನು ಕಟ್ಟಿಕೊಂಡು ಚೊಕ್ಕವೆನಿಸುವ ಚಿತ್ರ ಮಾಡಿರುವ ತೃಪ್ತಿ ನಿರ್ದೇಶಕರದ್ದು. “ಈ ಸ್ವಾರ್ಥ ಎಂಬುದು ಮನುಷ್ಯನ ಸಹಜ ಗುಣ.
ಸ್ವಾರ್ಥ ಅನ್ನುವುದು ಬೇರೆಯವರಿಗೆ ಯಾವ ರೀತಿ ಒಳಿತು ಮಾಡುತ್ತೆ ಎಂಬುದನ್ನೇ ಈ ಚಿತ್ರದಲ್ಲಿ ಹಾಸ್ಯ ಮೂಲಕ ಹೇಳಹೊರಟಿದ್ದೇನೆ. ಮನುಷ್ಯ ಎಷ್ಟೇ ಸ್ವಾರ್ಥಿಯಾಗಿದ್ದರೂ, ಅವರಲ್ಲೂ ನಿಸ್ವಾರ್ಥ ಇದ್ದೇ ಇರುತ್ತೆ’ ಎನ್ನುತ್ತಾರೆ ಅಶ್ವಿನ್. ಆ ಅಂಶದ ಜೊತೆಗೆ ಪ್ರೀತಿಯ ಎಳೆಯೊಂದಿಗೆ ಹಾಸ್ಯ ಲೇಪನ ಮಾಡಿ ಚಿತ್ರ ಮಾಡಿರುವ ನಿರ್ದೇಶಕರು, ಹಾಸ್ಯ ಮೂಲಕ ತಕ್ಕಮಟ್ಟಿಗೆ ಒಂದು ಸಂದೇಶವನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ.
“ಸ್ವಾರ್ಥ ರತ್ನ’ ಚಿತ್ರಕ್ಕೆ ಆದರ್ಶ್ ಹೀರೋ. ಇವರಿಗೂ ಇದು ಮೊದಲ ಅನುಭವ. ಚಾರ್ಟಡ್ ಅಕೌಂಟೆಂಟ್ ಆಗಿರುವ ಅವರು, ಈಗಾಗಲೇ ಐದಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2012 ರಲ್ಲಿ ಹಿಂದಿಯ ಒಂದು ಚಿತ್ರದಲ್ಲೂ ನಟಿಸಿದ್ದಾರೆ. ಆದರ್ಶ ನಟನೆ ಶಾಲೆಯಲ್ಲಿ ಕಲಿತಿದ್ದಾರೆ. ಅವರಿಲ್ಲಿ ಸ್ವಾರ್ಥ ಸ್ವಭಾವದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಪಾತ್ರಗಳನ್ನು ಸುಲಭವಾಗಿ ನಿರ್ವಹಿಸಬಹುದು.
ಆದರೆ, ಈ ಸ್ವಾರ್ಥ ವ್ಯಕ್ತಿತ್ವವನ್ನು ಹೇಗೆ ತೋರ್ಪಡಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದ ಆದರ್ಶ್, ಹಲವು ಸಲ ನಿರ್ದೇಶಕರ ಜತೆಗೆ ಚರ್ಚಿಸಿ, ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಸ್ನೇಹಾ ಸಿಂಗ್ ನಾಯಕಿ. ಇವರಿಗೆ ಕನ್ನಡ ಭಾಷೆ ಗೊತ್ತಿರದಿದ್ದರೂ, ಅರ್ಥ ಮಾಡಿಕೊಂಡು ನಟಿಸಿರುವುದು ವಿಶೇಷವಂತೆ. ರಿಷಿಕಾ ವರ್ಷ ಎಂಬ ಇನ್ನೊಬ್ಬ ಬೆಡಗಿಯೂ ಇಲ್ಲಿ ಕವನ ಎಂಬ ಪಾತ್ರ ಮಾಡಿದ್ದಾರಂತೆ.
ಅದೊಂದು ರೀತಿ ಗಂಡುಬೀರಿ ಹುಡುಗಿ ಪಾತ್ರವಾಗಿದ್ದು, ಸೆಲ್ಫ್ಲೆಸ್ ಹುಡುಗಿಯೊಬ್ಬಳು ಸೆಲ್ಫಿಶ್ ಹುಡುಗನನ್ನು ಭೇಟಿ ಮಾಡಿದಾಗ ಅವಳಲ್ಲಿರುವ ಹೆಣ್‌ತನ ಹೇಗೆ ಹೊರಬರುತ್ತೆ ಎಂಬ ಪಾತ್ರ ಅವರ ಪಾಲಿಗೆ ಸಿಕ್ಕಿದೆಯಂತೆ. ಎಂದಿನಂತೆ ಇಲ್ಲೂ ಅಮಿತ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿ.ಜೆ. ಭರತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೊದಲು ಅವರು ಈ ಕಥೆ ಕೇಳಿದಾಗ, ಅವರ ಕೈಯಲ್ಲಿ ನಾಲ್ಕು ಚಿತ್ರಗಳಿದ್ದವಂತೆ. ಈ ಚಿತ್ರ ಮಾಡೋದಾ, ಬಿಡೋದಾ ಎಂಬ ಗೊಂದಲದಲ್ಲಿದ್ದರಂತೆ. ಕೊನೆಗೆ ಒಳ್ಳೆಯ ಕಥೆ ಮಿಸ್ ಮಾಡ್ಕೊàಬಾರದು ಅಂತ ಕೆಲಸ ಮಾಡಿಕೊಟ್ಟಿದ್ದಾರೆ ಭರತ್. ಅಂದಹಾಗೆ, ಇದು ರನ್ನಿಂಗ್ ಹಾರ್ಸ್ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗಿದೆ.