ಬೆಂಗಳೂರು: ಕೋವಿಡ್ ವೈರಸ್ ನಗರದಲ್ಲಿ ತೀವ್ರವಾಗಿ ಹರಡುತ್ತಿದ್ದು,ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ವೆಂಟಿಲೇಟರ್ ಮತ್ತು ತೀವ್ರ ನಿಗಾ ಘಟಕಗಳ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಪ್ರಸ್ತುತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿನ ಲಕ್ಷಣಗಳಿಲ್ಲದ ರೋಗಿಗಳ ಡಿಸಾcರ್ಜ್ ಅವಧಿಗೆ ಕತ್ತರಿ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸದ್ಯ ಲಕ್ಷಣಗಳಿಲ್ಲದ ಯಾವುದೇ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿಲ್ಲ. ಆದರೆ, ಆರಂಭದಲ್ಲಿ ಜ್ವರ ಮತ್ತಿತರ ಲಕ್ಷಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಡ್ಡಾಯವಾಗಿ ಹತ್ತು ದಿನಗಳ ಕಾಲ ಅವರನ್ನು ಆರೈಕೆ ಮಾಡಲಾಗುತ್ತಿದೆ. ಆ ಅವಧಿಯನ್ನು ಏಳು ದಿನಗಳಿಗೆ ತಗ್ಗಿಸುವುದು ಸೂಕ್ತ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಸರ್ಕಾರದ ಉನ್ನತಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ, ಕಡಿಮೆ ಸೋಂಕಿನ ಲಕ್ಷಣಗಳಿದ್ದು, ಮನೆಯಲ್ಲಿ ಐಸೋಲೇಷನ್ ಆಗಲು ಅಗತ್ಯ ವ್ಯವಸ್ಥೆ ಬಗ್ಗೆ ಪರಿಶೀಲನೆಗೆ ಒಳಪಡದ ರೋಗಿಗಳನ್ನು ಆಸ್ಪತ್ರೆಗಳ ಬದಲಿಗೆ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುವುದು ಸೂಕ್ತ. ಇದರಿಂದ ನಿಜವಾಗಿಯೇ ತುರ್ತು ಇದ್ದ ರೋಗಿಗೆ ಹಾಸಿಗೆಗಳುದೊರೆಯುತ್ತವೆ ಎಂದೂ ಅಧಿಕಾರಿಗಳು ಮತ್ತು ವೈದ್ಯರು ಶಿಫಾರಸು ಮಾಡಿದ್ದಾರೆ.
ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟ ಹಾಸಿಗೆಗಳ ಪೈಕಿ ಶೇ. 80 ಭರ್ತಿಯಾಗಿವೆ.ಈಮಧ್ಯೆ ನಿತ್ಯ ಸರಾಸರಿ ನಾಲ್ಕೂವರೆ ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಏರಿದರೆ, ಆಗ ಹಾಸಿಗೆಗಳಿಗೆ ತತ್ವಾರ ಉಂಟಾಗ ಬಹುದು. ಆದ್ದರಿಂದ ಒಂದು ಕಡೆ ವೆಂಟಿಲೇಟರ್ ಐಸಿಯು ಮತ್ತು ಐಸಿಯು (ತೀವ್ರ ನಿಗಾ ಘಟಕ)ಗಳ ಸಂಖ್ಯೆ ಹೆಚ್ಚಿಸುವುದು, ಮತ್ತೂಂದೆಡೆ ಈಗಿರುವ ರೋಗಿಗಳ ಡಿಸ್ಚಾರ್ಜ್ ಅವಧಿಯನ್ನು ಕಡಿತಗೊಳಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಅಗತ್ಯ ಇದೆ ಎಂದು ತಜ್ಞರು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಶೀಘ್ರ ವೆಂಟಿಲೇಟರ್ ಸಂಖ್ಯೆ ಏರಿಕೆ: ಇದರ ಮುಂದುವರಿದ ಭಾಗವಾಗಿ ಒಂದೆರಡು ವಾರಗಳಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ 25 ವೆಂಟಿಲೇಟರ್‌ಗಳು, ಸಿವಿ ರಾಮನ್ ನಗರ ಮತ್ತು ಜಯನಗರದ ಜನರಲ್ ಆಸ್ಪತ್ರೆಗಳಲ್ಲಿಕ್ರಮವಾಗಿ 16 ಮತ್ತು8 ವೆಂಟಿಲೇಟರ್‌ಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇದಲ್ಲದೆ, ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಒಂದು ವಾರದಲ್ಲಿ ಒಟ್ಟಾರೆ 60 ವೆಂಟಿಲೇಟರ್‌ಗಳನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವೈರಸ್ “ಲೋಡ್’ ಕಡಿಮೆಯಾಗುತ್ತಿದ್ದಂತೆ ಡಿಸ್ಚಾರ್ಜ್ ಆಗಬಹುದು. ಆದರೆ, ಕೆಲವು ಸಲ ದಿಢೀರ್ ದ್ವಿಗುಣಗೊಂಡು ಅಪಾಯ ಎದುರಾಗುವ ಸಾಧ್ಯತೆಯೂ ಇರುತ್ತದೆ.ಈಹಿನ್ನೆಲೆಯಲ್ಲಿ ಡಿಸಾcರ್ಜ್ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸೋಂಕು ಲಕ್ಷಣ ಕಡಿಮೆಯಾಗುತ್ತಿದ್ದಂತೆ ಸೋಂಕಿತರು ಆಸ್ಪತ್ರೆಗಳಿಂದ ಕಾಲ್ಕೀಳಲು ವೈದ್ಯರಿಗೆ ಇನ್ನಿಲ್ಲದ ನೆಪಗಳನ್ನು ಹೇಳುತ್ತಿದ್ದಾರೆ. ಬಹು ತೇಕರು ಆಸ್ಪತ್ರೆಗಳಿಗಿಂತ ಮನೆಗಳ ಆರೈಕೆಗೆ ಹೆಚ್ಚು ಮನಸ್ಸು ಮಾಡುತ್ತಾರೆ. ನಿರಾಕರಿಸಿದರೂ ಸಬೂಬುಗಳನ್ನು ನೀಡುತ್ತಾರೆ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಉಚಿತ ವೈದ್ಯಕೀಯ ಕಿಟ್? : ಹೋಂ ಐಸೋಲೇಷನ್ ಇರುವವರಿಗೆ ಉಚಿತ ಸಣ್ಣ ಗಾತ್ರದ “ಅಗತ್ಯ ವೈದ್ಯಕೀಯಕಿಟ್’ ಅನ್ನು ವಿತರಿಸಬೇಕು ಎಂದು ಸರ್ಕಾರ ಚಿಂತನೆ ನಡೆಸಿದೆ. ಈ ಕಿಟ್ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್, ಸ್ಯಾನಿಟೈಸರ್,14 ದಿನಗಳಿಗೆ ಆಗುವಷ್ಟು ಮುಖಗವಸುಗಳು ಮತ್ತಿತರ ವಸ್ತುಗಳನ್ನು ಒಳಗೊಂಡಿರುತ್ತದೆ.ಈ ಕ್ರಮದಿಂದ ರೋಗಿಗಳು ಆಸ್ಪತ್ರೆಗಳಿಗೆ ಬರುವುದು ಸಾಧ್ಯವಾದಷ್ಟು ತಪ್ಪಲಿದೆ. ಐಸಿಯು ಹಾಸಿಗೆಗಳ ಅಗತ್ಯತೆಕಡಿಮೆ ಮಾಡಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರವಾಗಿದೆ.
–ವಿಜಯಕುಮಾರ್ ಚಂದರಗಿ