ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಕಳ್ಳ ದಾರಿಯಲ್ಲಿ ರಾಜ್ಯಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಗಡಿ ಜನರಲ್ಲಿ ಆತಂಕ ದೂರು ಮಾಡಲು ಗಡಿಯೊಳಗೆ ನುಸುಳುವ ಜನರನ್ನು ಪತ್ತೆ ಹಚ್ಚಲು ಪೊಲೀಸರು ಬೀಗಿ ಭದ್ರತೆಗೆ ಮುಂದಾಗಿದ್ದಾರೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಗ್ರಾಮಗಳು ಐದರಿಂದ ಹತ್ತು ಕಿ.ಮೀ. ಅಂತರದಲ್ಲೇ ಮಹಾರಾಷ್ಟ್ರದ ಗಡಿ ಪ್ರಾರಂಭವಾಗುತ್ತದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಮಿರಜ್, ಇಚಲಕರಂಜಿ, ಅಕ್ಕಿವಾಟ, ಘೋಸರವಾಡ, ಕುರಂಧವಾಡ, ಕಾಗಲ ಗ್ರಾಮಗಳಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ.
ಹೀಗಾಗಿ ಅಲ್ಲಿಯ ಜನರು ಕಳ್ಳ ರಸ್ತೆ ಮೂಲಕ ರಾಜ್ಯದ ಗಡಿ ಗ್ರಾಮಗಳಾದ ಯಕ್ಸಂಬಾ, ಮಲಿಕವಾಡ, ಸದಲಗಾ, ಜನವಾಡ, ಬೇಡಕಿಹಾಳ, ಶಮನೇವಾಡಿ, ಬೋರಗಾಂವ, ಕಸನಾಳ, ಬೋರಗಾಂವವಾಡಿ, ಢೋಣೆವಾಡಿ, ಕಾರದಗಾ, ಬಾರವಾಡ, ಮಾಂಗೂರ, ಕೊಗನೊಳ್ಳಿ, ಸೌಂದಲಗಾ, ಆಡಿ, ಬೇನಾಡಿ, ಕುರಲಿ, ಬುದಿಹಾಳ, ಯಮಗರಣಿ, ಕೋಡ್ನಿ, ಶೇಂಡೂರ, ಅಪ್ಪಾಚಿವಾಡಿ ಗ್ರಾಮದ ಜನರಲ್ಲಿ ನಡುಕು ಹುಟ್ಟುತ್ತಿದೆ.
ಅಂತಾರಾಜ್ಯ ವಲಸೆ ಕಾರ್ಮಿಕರು ಸೇವಾ ಸಿಂಧೂ ಆಪ್ ಮೂಲಕ ಪಾಸ್ ಪಡೆದುಕೊಂಡು ಗಡಿಯೊಳಗೆ ಬಂದು ಹೋಮ್ ಕ್ವಾರಂಟೈನ್ ನಲ್ಲಿದರೂ ಕೂಡಾ ಸುತ್ತಮುತ್ತ ಜನರಲ್ಲಿ ಆತಂಕ ಮನೆ ಮಾಡಿದೆ. ಬೇರೆ ರಾಜ್ಯದಲ್ಲಿದ್ದ ಕಾರ್ಮಿಕರು ಸುರಕ್ಷಿತವಾಗಿ ತವರು ಸೇರಿದ್ದಾರೆ ಎಂಬ ಖುಷಿ ಅವರಿಗೆ ಇದೆ. ಆದರೆ ಅವರ ಸುತ್ತಮುತ್ತ ನೆರೆ ಹೊರೆಯವರಲ್ಲಿ ಆತಂಕ ಕಾಡುತ್ತಿದೆ. ಕ್ವಾರಂಟೈನ್‌ದಲ್ಲಿದ್ದವರು ರಾತ್ರಿ ಹೊತ್ತು ಹೊರಗೆ ತಿರುಗಾಡುತ್ತಿದ್ದಾರೆ ಎಂಬ ಆಪಾದನೆಗಳು ತಾಲೂಕಾಡಳಿತ ಮೇಲಿದೆ.
ಗಡಿ ರಸ್ತೆಗಳು ಸಂಪೂರ್ಣ ಬಂದ್: ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಬೆಳೆಸಲು ಗಡಿಯಲ್ಲಿ ನೂರಾರು ರಸ್ತೆಗಳು ಇದ್ದು, ಪ್ರತಿಯೊಂದು ರಸ್ತೆ ಬಂದ್ ಮಾಡಿ ಭದ್ರತೆ ಒದಗಿಸಲು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜ್ಯದ ಗಡಿ ಗ್ರಾಮಗಳಿಗೆ ಮಹಾರಾಷ್ಟ್ರದ ಗಡಿಭಾಗದ ಜನತೆಯ ಸಂಪರ್ಕ ಇದ್ದುದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸದಲಗಾ-ದತ್ತವಾಡ, ಸದಲಗಾ –ಘೋಸರವಾಡ ಸಂಪರ್ಕ ರಸ್ತೆಗಳ ಮೇಲೆ ಮಣ್ಣು ಮತ್ತು ಗಿಡಗಂಟಿಗಳನ್ನು ಕಡೆದು ಹಾಕಿ ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿದ್ದಾರೆ. ಬೋರಗಾಂವ-ಇಚಲಕರಂಜಿ ರಸ್ತೆ ಬಂದ್ ಮಾಡಲಾಗಿದೆ. ಯಕ್ಸಂಬಾ-ದತ್ತವಾಡ ರಸ್ತೆ ಬಂದ್ ಮಾಡಿದ್ದು, ಎಲ್ಲ ಕಡೆಗಳಲ್ಲಿ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.
ಗಡಿ ರಸ್ತೆಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಡಿವೈಎಸ್‌ಪಿ ಮನೋಜ ನಾಯಿಕ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಬೈಕ್ ಮೇಲೆ ಗಡಿ ಭಾಗದ ಆಯಕೋ, ಮಾಣಕಾಪೂರ ಹಾಗೂ ಮಾಂಗೂರ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿತು. ಪೊಲೀಸ್ ಭದ್ರತೆ ಬಗ್ಗೆ ಮಾಹಿತಿ ಕಲೆಹಾಕಿತು.
ರಾಜ್ಯದಲ್ಲಿ ಅನಧಿಕೃತವಾಗಿ ಬರುವ ವಾಹನಗಳ ಮೇಲೆ ನಿಗಾ ವಹಿಸುವುದು, ಯಾರನ್ನು ಅನುಮತಿ ಇಲ್ಲದೆ ಪ್ರವೇಶ ಕೊಡಬಾರದು ಹಾಗೂ ಕಳ್ಳ ದಾರಿಯಿಂದ ಬರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೋರಗಾವ ಪಟ್ಟಣಕ್ಕೆ ಸೇರುವ ಅನೇಕ ಕಳ್ಳ ದಾರಿಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಕಳ್ಳ ದಾರಿಗಳನ್ನು ಬಂದ್ ಮಾಡುವ ಬಗ್ಗೆ ಪಪಂ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ. –
ಮನೋಜ ನಾಯಿಕ, ಡಿವೈಎಸ್‌ಪಿ
-ಮಹಾದೇವ ಪೂಜೇರಿ