ಕಾಸರಗೋಡು: ಜಿಲ್ಲೆಯ ಪೆರಿಯ ಕನಿಕುಂಡಿನಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯವಿರುವ ಸ್ಥಳದ ಸಮೀಕ್ಷೆ ಪೂರ್ತೀಕರಿಸಲಾಗಿದೆ. ಕಿರು ವಿಮಾನ ನಿಲ್ದಾಣ ಸ್ಥಾಪಿಸಲು 80 ಎಕರೆ ಸ್ಥಳ ಅಗತ್ಯವಿದೆ. ಈ ಪೈಕಿ 28.50 ಎಕರೆ ಸರಕಾರಿ ಭೂಮಿ ಇದೆ. ಬಾಕಿ 51.50 ಎಕ್ರೆ ಸ್ಥಳದ ಅಗತ್ಯವಿದೆ. ಅದನ್ನು ಪರಿಸರದ ಖಾಸಗಿ ವ್ಯಕ್ತಿಗಳಿಂದ ಖರೀದಿಸಲಾಗುವುದು.
20 ಮನೆಯವರು ಜಮೀನು
ಬಿಟ್ಟುಕೊಡಲು ಸಿದ್ಧ
ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನನ್ನು ಬಿಟ್ಟುಕೊಡಲು ಪರಿಸರದ 20 ಮನೆಯವರು ಒಪ್ಪಿಗೆ ನೀಡಿದ್ದಾರೆಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ತಾವು ಬಿಟ್ಟುಕೊಡುವ ಸ್ಥಳಕ್ಕೆ ತಮಗೆ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಬೇಡಿಕೆಯನ್ನು ಈ ಕುಟುಂಬದವರು ಮುಂದಿರಿಸಿದ್ದಾರೆ. ಅವರ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯದ ಭೂ ವಶಪಡಿಸುವ ಕ್ರಮಕ್ಕೆ ಶೀಘ್ರ ಚಾಲನೆ ನೀಡಲಾಗುವುದೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಕಿರು ವಿಮಾನ ನಿಲ್ದಾಣ ಕಾರ್ಯಾರಂಭಗೊಂಡಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಿ ಬದಲಾಗಲಿದೆ. ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಕಾರ್ಯಾರಂಭಗೊಳ್ಳಲಿದೆ. ಅಲ್ಲಿಂದ ಮತ್ತು ಮಂಗಳೂರು ಹಾಗೂ ಮತ್ತಿತರ ವಿಮಾನ ನಿಲ್ದಾಣಗಳಿಂದ ಪೆರಿಯ ಕಿರು ವಿಮಾನ ನಿಲ್ದಾಣಗಳಿಗೆ ಕಿರು ವಿಮಾನಗಳಲ್ಲಿ ಪ್ರವಾಸಿಗರನ್ನು ಜಿಲ್ಲೆಗೆ ತರಲು ಈ ಯೋಜನೆಯಿಂದ ಸಾಧ್ಯವಾಗಲಿದೆ. ಮಾತ್ರವಲ್ಲ ಇದರಿಂದ ಬೇಕಲ ಪ್ರವಾಸೋದ್ಯಮ ಯೋಜನೆ ಮಾತ್ರವಲ್ಲ, ಜಿಲ್ಲೆಯ ಇತರ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ದೇಶಿ ಮತ್ತು ವಿದೇಶಿ ಪ್ರವಾಸಿಗಳು ಹರಿದು ಬರುವ ಸಾಧ್ಯತೆಯಲ್ಲಿ ಹೆಚ್ಚಳವಾಗಲಿದೆ. ಈ ಮೂಲಕ ಅದು ಜಿಲ್ಲೆಗೆ ಅಂತಾರಾಷ್ಟ್ರೀಯ ಭೂಪಟದಲ್ಲಿ ಪ್ರಮುಖ ಸ್ಥಾನ ನೀಡಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಸ್ಥಳದ ಮೂರು ಕಿಲೋ ಮೀಟರ್ ದೂರದಲ್ಲಿ ಬೇಕಲ ಕೋಟೆ ಇದೆ. ಅಲ್ಲಿಂದ ಕೆಲವೇ ಕಿ.ಮೀ. ದೂರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಕ್ಯಾಶ್ ಕೌಂಟರ್ ಅಲ್ಲದೆ ನೂತನವಾಗಿ ನಿರ್ಮಿಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿರುವ ಆನಂದಾಶ್ರಮ ಅಲ್ಲಿಂದ ಕೆಲವೇ ಮೀಟರ್ ದೂರದಲ್ಲಿದೆ. ಮಾತ್ರವಲ್ಲ ಚಂದ್ರಗಿರಿ ಕೋಟೆ, ಕಾಸರಗೋಡು ಕೋಟೆ, ಆರಿಕ್ಕಾಡಿ ಕೋಟೆ, ಪೊವ್ವಲ್ (ಪೊಳಲಿ) ಕೋಟೆ, ಪೊಸಡಿಗುಂಪೆ ಮತ್ತಿತರ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಪ್ರವಾಹ ಮತ್ತು ಅವುಗಳ ಅಭಿವೃದ್ಧಿಗೂ ಈ ಕಿರು ವಿಮಾನ ನಿಲ್ದಾಣ ಸಹಾಯಕವಾಗಲಿದೆ.