Advertisement

ಅನ್ಯ ಚಟುವಟಿಕೆಗೆ ಮಳಿಗೆ ಬಳಕೆ

04:59 PM Jun 21, 2018 | Team Udayavani |

„ಶಿವರಾಜ ಕೆಂಬಾವಿ
ಲಿಂಗಸುಗೂರು: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ
ಮಳಿಗೆಗಳನ್ನು ಪಡೆದ ಪರವಾನಗಿ ಪಡೆದ ವರ್ತಕರು ಅವುಗಳನ್ನು ವಸತಿ ಉದ್ದೇಶಕ್ಕೆ, ಅನ್ಯ ಚಟುವಟಿಕೆಗೆ ಬಾಡಿಗೆ ನೀಡುವ ಮೂಲಕ ಎಪಿಎಂಸಿ ನಿಯಮ ಹಾಗೂ ಒಪ್ಪಂದ ಉಲ್ಲಂಘಿಸಿದ್ದಾರೆಂಬ ಆರೋಪಗಳು
ರೈತರಿಂದ ಕೇಳಿಬರುತ್ತಿವೆ.

Advertisement

ನಗರ ಸೇರಿ ತಾಲೂಕಿನ ಮಸ್ಕಿ ಹಾಗೂ ಮುದಗಲ್‌ ಎಪಿಎಂಸಿಯಲ್ಲಿ 365 ಲೈಸನ್ಸ್‌ ಹೊಂದಿದ ವರ್ತಕರಿದ್ದಾರೆ. ಇದರಲ್ಲಿ 47 ಮಹಿಳಾ ವರ್ತಕರಿದ್ದಾರೆ. ತಾಲೂಕು ಕೇಂದ್ರ ಲಿಂಗಸುಗೂರು ಎಪಿಎಂಸಿ ಪ್ರಾಂಗಣದಲ್ಲಿ 122 ಮಳಿಗೆಗಳಿದ್ದು, ಇದರಲ್ಲಿ ಕೇವಲ 26 ಜನ ವರ್ತಕರು ಮಾತ್ರ ಕೃಷಿ ಉತ್ಪನ್ನಗಳ ವಹಿವಾಟು ನಡೆಸಿದ್ದಾರೆ. ಇನ್ನುಳಿದ ಮಳಿಗೆಗಳನ್ನು ಪಡೆದವರು ಅನ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ.

ಕಣ್ಣಿಗೆ ಮಣ್ಣು: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮದ ಪ್ರಕಾರ ಪ್ರಾಂಗಣದ ಮಳಿಗೆಗಳನ್ನು ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟಿಗೆ ಬಳಸಿಕೊಳ್ಳಬೇಕು. ಅಂಗಡಿ ಸಹಿತ ಗೋದಾಮಿಗೆ ಅನುಮತಿ ಪಡೆದು ವರ್ತಕರು ಎರಡಂತಸ್ತಿನ ಕಟ್ಟಡ ನಿರ್ಮಿಸಿಕೊಂಡು ವಾಸಕ್ಕೆ ಬಾಡಿಗೆ ನೀಡಿದ್ದಾರೆ. ಹಾಗೂ ಗೋಡೌನ್‌
ಗಳನ್ನು ಅನ್ಯ ಉದ್ದೇಶಕ್ಕಾಗಿ ಬಾಡಿಗೆಗೆ ನೀಡಿ ಲಕ್ಷಾಂತರ ಆದಾಯ ಸಂಪಾದಿಸುತ್ತಿದ್ದಾರೆ.

ಬಹುಪಾಲು ಮಳಿಗೆಗಳಲ್ಲಿ ಕೃಷಿ ವಹಿವಾಟು ನಡೆಯದೇ ಇರುವುದರಿಂದ ಹಾಗೂ ತಾಲೂಕಿನ ರೈತರು ಬೆಳೆದ ಉತ್ಪನ್ನಗಳಿಗೆ ಇಲ್ಲಿನ ಎಪಿಎಂಸಿಯಲ್ಲಿ ಸರಿಯಾದ ಬೆಲೆ ಸಿಗದೆ ಇರುವುದರಿಂದ ಅನಿವಾರ್ಯವಾಗಿ ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸಿಂಧನೂರು ಹಾಗೂ ಗಂಗಾವತಿಗೆ ತೆರಳುವ ಅನಿವಾರ್ಯತೆ ನಿರ್ಮಾಣವಾಗಿದೆ.

ಇದರಿಂದ ಎಪಿಎಂಸಿಗೆ ಬರಬೇಕಿದ್ದ ಆದಾಯ ಕುಂಠಿತವಾಗಿದೆ. ಇಲ್ಲಿವರೆಗೂ ಆಳ್ವಿಕೆ ನಡೆಸಿದ ಆಡಳಿತ ವರ್ಗದ ಕುಮ್ಮಕ್ಕಿನಿಂದ ಮಳಿಗೆಗಳನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಕಾನೂನು ಉಲ್ಲಂಘಿಸಿ ಸರಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. 

Advertisement

ಪ್ರಭಾವಿಗಳಿಗೆ ಮಳಿಗೆ ಹಂಚಿಕೆ: ಪ್ರಾಂಗಣದ ನಿವೇಶನ ಹಂಚಿಕೆಯಲ್ಲಿ ಎಪಿಎಂಸಿ ಕಾರ್ಯದರ್ಶಿಗಳು ಕಾನೂನು
ಉಲ್ಲಂಘಿಸಿದ್ದಾರೆ. ಮಾಡಿದ್ದಾರೆ. ರೈತ, ವ್ಯಾಪಾರಸ್ಥರಲ್ಲದ ಪ್ರಭಾವಿ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಿಂದ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಿದ 122 ಮಳಿಗೆಗಳ ಪೈಕಿ ಕೇವಲ 26 ಮಳಿಗೆಗಳಲ್ಲಿ ಮಾತ್ರ ವಹಿವಾಟು ನಡೆಯುತ್ತಿದೆ.

ಇನ್ನುಳಿದ ಮಳಿಗೆ ಹಾಗೂ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಾಂಗಣದ ಸ್ಥಿತಿ-ಗತಿಗಳನ್ನು ಪರಿಶೀಲನೆ ನಡೆಸಿ ಒಪ್ಪಂದ ಉಲ್ಲಂಘನೆ ಮಾಡಿದವರ ಲೈಸನ್ಸ್‌ ರದ್ದು ಮಾಡಿ ಪ್ರಾಂಗಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಮುಂದಾಗುತ್ತಿಲ್ಲ. ಇದರಿಂದ ಎಪಿಎಂಸಿ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎನ್ನುತ್ತಾರೆ ರೈತ ಮುಖಂಡರು.

ಎಪಿಎಂಸಿಯ 122 ಮಳಿಗೆಗಳಲ್ಲಿ 26 ಮಳಿಗೆಗಳಲ್ಲಿ ಕೃಷಿ ವಹಿವಾಟು ನಡೆಯುತ್ತಿದೆ. 122 ಮಳಿಗೆಗಳಲ್ಲಿ
ವಹಿವಾಟು ನಡೆದರೆ ಬೆಲೆಗಳಲ್ಲಿ ಸ್ಪರ್ಧೆ ಏರ್ಪಟ್ಟು ರೈತರಿಗೆ ಅನುಕೂಲವಾಗಲಿದೆ. ಎಪಿಎಂಸಿ ಆಡಳಿತ ವರ್ಗ ಕೂಡಲೇ 122 ಮಳಿಗೆಗಳಲ್ಲೂ ಕೃಷಿ ಉತ್ಪನ್ನಗಳ ವಹಿವಾಟು ನಡೆಸಲು ಕ್ರಮ ಕೈಗೊಳ್ಳಬೇಕು. ವಹಿವಾಟು
ನಡೆಸದ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಂಡು ಬೇರೆಯವರಿಗೆ ಹಂಚಿಕೆ ಮಾಡಬೇಕು.
ಅಮರಣ್ಣ ಗುಡಿಹಾಳ, ರೈತ ಮುಖಂಡರು.

ಲಿಂಗಸುಗೂರು ಎಪಿಎಂಸಿ ಕಾರ್ಯದರ್ಶಿ ಹುದ್ದೆಗೆ ಪ್ರಭಾರ ವಹಿಸಿಕೊಂಡು ತಿಂಗಳಾಗಿದೆ. ಅನ್ಯ ಉದ್ದೇಶಕ್ಕಾಗಿ ಮಳಿಗೆಗಳು ಬಳಕೆಯಾಗುತ್ತಿರುವುದು ನನ್ನ ಗಮನಕ್ಕಿಲ್ಲ. ಈ ಬಗ್ಗೆ ಗಮನಹರಿಸಿ ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ.
ಎ.ಕೆ. ವೀರಣ್ಣ ಎಪಿಎಂಸಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next