ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದೆ. ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಚಾಮರಾಜಪೇಟೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಕಾಟನ್‌ಪೇಟೆಯ ಗಿರಿಪುರ ನಿವಾಸಿ ರೌಡಿಶೀಟರ್ ಅನಿಲ್ ಅಲಿಯಾಸ್ ಚಾಂಡಾಲ್ (38) ಬಂಧಿತ. ಆರೋಪಿಯ ಎಡಗಾಲಿಗೆ ಗುಂಡು ತಗುಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಹಲ್ಲೆಯಿಂದ ಕಾನ್‌ಸ್ಟೆಬಲ್ ಚಂದ್ರಶೇಖರ್ ಪಾಟೀಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕಾಟನ್‌ಪೇಟೆ ಠಾಣೆಯ ರೌಡಿಶೀಟರ್ ಅನಿಲ್ ವಿರುದ್ಧ ಕೋರಮಂಗಲ, ಪರಪ್ಪನ ಅಗ್ರಹಾರ, ಚಾಮರಾಜಪೇಟೆ ಠಾಣೆ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿ 14ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಆರು ತಿಂಗಳ ಹಿಂದಷ್ಟೇ ಹಫ್ತಾ ವಸುಲಿ ಪ್ರಕರಣದಲ್ಲಿ ಕಾಟನ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿ ಬಂದ ಆತ ಮತ್ತೂಮ್ಮೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು, ಮುಂಜಾನೆ ಮಾರುಕಟ್ಟೆಗೆ ತೆರಳುವವರನ್ನು ಅಡ್ಡಹಾಕಿ ಹಣ ವಸೂಲಿ ಮಾಡುತ್ತಿದ್ದ. ಹಣ ಕೊಡದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿದ್ದ. ಅನಿಲ್‌ಗೆ ಹೆದರಿದ್ದ ಸಾರ್ವಜನಿಕರು ಠಾಣೆಗೆ ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದರು.
ಎಡಗಾಲಿಗೆ ಗುಂಡೇಟು: ಈ ಮಧ್ಯೆ ಸೇತು ಎಂಬವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಚಾಮರಾಜಪೇಟೆ ಪೊಲೀಸರು ಅನಿಲ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಭಾನುವಾರ ರಾತ್ರಿ ಗಸ್ತಿನಲ್ಲಿದ್ದ ಚಾಮರಾಜಪೇಟೆ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಆರೋಪಿ ಕಾಟನ್‌ಪೇಟೆಯ ಪಶುವೈದ್ಯಕೀಯ ಕಾಲೇಜು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೂಡಲೇ ತಮ್ಮ ಐವರು ಸಿಬ್ಬಂದಿ ಜತೆ ರಾತ್ರಿ 12.30ರ ಸುಮಾರಿಗೆ ಸ್ಥಳಕ್ಕೆ ತೆರಳಿದ್ದರು. ಪೊಲೀಸರನ್ನು ನೋಡುತ್ತಿದ್ದಂತೆ ಆತ ಓಡಲು ಆರಂಭಿಸಿದ್ದಾನೆ. ಕಾನ್ಸ್‌ಟೇಬಲ್ ಚಂದ್ರಶೇಖರ್ ಆರೋಪಿಯನ್ನು ಹಿಡಿಯಲು ಹೋದಾಗ ಡ್ಯಾಗರ್‌ನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ.
ಈ ವೇಳೆ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಮತ್ತೆ ಕಾನ್‌ಸ್ಟೆಬಲ್ ಮೇಲೆ ಮಾರಕಾಸ್ತ್ರದಿಂದ ಇರಿಯಲು ಮುಂದಾದಾಗ ಆತ್ಮರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.