ಹೊಸದಿಲ್ಲಿ: ಮೆಕ್ಸಿಕೋದ ಗ್ವಾಡಲಜಾರದಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯ ವನಿತೆಯರ 50 ಮೀ. 3 ಪೊಸಿಸನ್ಸ್ ವಿಭಾಗದಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಅವರು ಬೆಳ್ಳಿಯ ಪದಕ ಗೆದ್ದಿದ್ದಾರೆ.
ಜೊರಾಗಿ ಗಾಳಿ ಬೀಸುತ್ತಿದ್ದರೂ ಉತ್ತಮ ನಿರ್ವಹಣೆ ದಾಖಲಿಸಿದ ಅಂಜುಮ್ 45 ಹೊಡೆತಗಳ ಫೈನಲ್ ಹೋರಾಟದಲ್ಲಿ 454.2 ಅಂಕ ಗಳಿಸಿ ಬೆಳ್ಳಿ ಗೆಲ್ಲಲು ಯಶಸ್ವಿಯಾದರು. ಇದು ವಿಶ್ವಕಪ್‌ನಲ್ಲಿ ಅವರ ಮೊದಲ ಪದಕವಾಗಿದೆ. ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಚೀನದ ರುಯಿಜಿಯಾವೊ ಪೆಯಿ (455.4) ಚಿನ್ನ ಗೆದ್ದರೆ ಅದೇ ದೇಶದ ಟಿಂಗ್ ಸನ್ ಕಂಚು ಪಡೆದರು.
ಈ ವಿಶ್ವಕಪ್‌ನಲ್ಲಿ ಇದು ಭಾರತಕ್ಕೆ ಲಭಿಸಿದ ಎಂಟನೇ ಮತ್ತು ಮೊದಲ ಬೆಳ್ಳಿಯ ಪದಕವಾಗಿದೆ. ಭಾರತ ಈ ಮೊದಲು ಮೂರು ಚಿನ್ನ ಮತ್ತು ನಾಲ್ಕು ಕಂಚಿನ ಪದಕ ಜಯಿಸಿತ್ತು. ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಇಷ್ಟರವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಒಟ್ಟಾರೆ ಎಂಟು ಪದಕ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಚೀನ ದ್ವಿತೀಯ (2 ಚಿನ್ನ, 2 ಬೆಳ್ಳಿ, 1 ಕಂಚು) ಸ್ಥಾನದಲ್ಲಿದೆ.
ಫೈನಲ್ ಸ್ಪರ್ಧೆಯ ಆರಂಭದಲ್ಲಿಯೇ ಅಂಜುಮ್ ಪದಕ ಗೆಲ್ಲುವ ಫೇವರಿಟ್ ಸ್ಪರ್ಧಿಯಾಗಿದ್ದರು. 15 ಹೊಡೆತಗಳ ಮೊದಲ ಸುತ್ತು ಮುಗಿದಾಗ ಅಂಜುಮ್ ಮೂರನೇ ಸ್ಥಾನದಲ್ಲಿದ್ದರು. ಐದು ಹೊಡೆತಗಳ ಪ್ರೋನ್ ಪೊಸಿಸನ್‌ನಲ್ಲಿ ಅಂಜುಮ್ ಮುನ್ನಡೆ ಸಾಧಿಸಲು ಯಶಸ್ವಿಯಾದರು. 41ನೇ ಹೊಡೆತದಲ್ಲಿ ಅದ್ಭುತವಾಗಿ ಆಡಿ 10.8 ಅಂಕ ಕಲೆ ಹಾಕಿದ ಅಂಜುಮ್ ಬೆಳ್ಳಿ ಗೆದ್ದರು. ಅರ್ಹತಾ ಸುತ್ತಿನಲ್ಲಿಯೂ ಅಂಜುಮ್ ಅಮೋಘ ಆಟದ ಪ್ರದರ್ಶನ ನೀಡಿದ್ದರು.
ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ 15ರ ಹರೆಯದ ಅನೀಶ್ ಭಾನ್ವಾಲ ಅವರು ಭರ್ಜರಿ ಆಟವಾಡಿದರೂ ಫೈನಲ್ ಹಂತಕ್ಕೇರಲು ವಿಫಲರಾಗಿ ನಿರಾಶೆ ಅನುಭವಿಸಿದರು. ಮೊದಲ ಸುತ್ತಿನ ಬಳಿಕ ಮೂರನೇ ಸ್ಥಾನದಲ್ಲಿದ್ದ ಅವರು ಆಬಳಿಕ ಆಘಾತ ಅನುಭವಿಸಿ ಏಳನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಕಣದಲ್ಲಿದ್ದ ಭಾರತದ ಇನ್ನೋರ್ವ ಸ್ಪರ್ಧಿ ನೀರಜ್ ಕುಮಾರ್ 13ನೇ ಸ್ಥಾನ ಪಡೆದರು.