ಒಸಿಜೆಕ್ (ಕ್ರೊವೇಶಿಯಾ) : ಇಂಟರ್‌ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ (ಐಎಸ್‌ಎಸ್‌ಎಫ್) ವಿಶ್ವಕಪ್ ಕೂಟದಲ್ಲಿ ಯುವ ಶೂಟರ್ ಸೌರಭ್ ಚೌಧರಿ ಕಂಚಿನ ಪದಕಕ್ಕೆ ಗುರಿಯಿರಿಸಿ ಭಾರತದ ಖಾತೆ ತೆರೆದಿದ್ದಾರೆ.
ಶುಕ್ರವಾರ ನಡೆದ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 19ರ ಹರೆಯದ ಚೌಧರಿ 220 ಅಂಕ ಗಳೊಂದಿಗೆ ಕಂಚನ್ನು ತಮ್ಮದಾಗಿಸಿ ಕೊಂಡರು. ಮತ್ತೋರ್ವ ಭಾರತೀಯ ಶೂಟರ್ ಅಭಿಷೇಕ್ ವರ್ಮ ಇದೇ ವಿಭಾದಲ್ಲಿ 5ನೇ ಸ್ಥಾನಿಯಾದರು. ಶರ್ಮ ಫೈನಲ್ಸ್‌ನಲ್ಲಿ 179.3 ಅಂಕ ಗಳಿಸಿದರು.
ಬಳಿಕ ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಭಾರ ತಕ್ಕೆ ಕಂಚು ಒಲಿಯಿತು. ಮನು ಭಾಕರ್, ಯಶಸ್ವಿನಿ ದೇಸ್ವಾಲ್, ರಾಹಿ ಸರ್ನೋಬತ್ ಅವರನ್ನೊಳಗೊಂಡ ತಂಡ ಹಂಗೇರಿಯನ್ನು 16-12 ಅಂತರದಿಂದ ಮಣಿಸಿತು.
ಮನುಗೆ 7ನೇ ಸ್ಥಾನ
ಆದರೆ ವನಿತೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ ಮನು ಭಾಕರ್ ತೀರಾ ಹಿಂದುಳಿದರು. 137.3 ಅಂಕ ಗಳಿಸಿ 7ನೇ ಸ್ಥಾನಕ್ಕೆ ಕುಸಿಯುವ ಮೂಲಕ ನಿರಾಸೆ ಮೂಡಿಸಿದರು.
ಪುರುಷರ 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲೂ ಭಾರತಕ್ಕೆ ಪದಕ ತಪ್ಪಿತು. ದಿವ್ಯಾಂಶ್ ಸಿಂಗ್ ಪನ್ವಾರ್, ದೀಪಕ್ ಕುಮಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ತಂಡ ಸರ್ಬಿಯಾಕ್ಕೆ ಶರಣಾಗಿ 4ನೇ ಸ್ಥಾನಿಯಾಯಿತು.