ಹೊಸದಿಲ್ಲಿ: ಜಿತು ರಾಯ್ ಭಾರತದ ಭರವಸೆಯ ಶೂಟರ್‌ಗಳಲ್ಲಿ ಒಬ್ಬರು.
ಆದರೆ ಇನ್ನು ಅವರು ಶೂಟಿಂಗ್‌ನಿಂದಷ್ಟೇ ಅಲ್ಲ, ದೇಶ ಸೇವೆಯಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕ್ರೀಡಾಪಟು ಎರಡು ದಿನಗಳ ಹಿಂದಷ್ಟೇ ಸುಬೇದಾರ್ ಮೇಜರ್ ಆಗಿ ಭಡ್ತಿ ಹೊಂದಿದ್ದಾರೆ.
‘ಈಶಾನ್ಯ ಭಾರತದಲ್ಲಿ ಯಾವತ್ತೂ ಪ್ರಕ್ಷುಬ್ಧ ವಾತಾವರಣ ಇರುತ್ತದೆ ಎಂಬ ಸುದ್ದಿಯನ್ನು ನೀವು ಓದುತ್ತ ಇರುತ್ತೀರಿ. ನಾವೀಗ ಇಲ್ಲಿ ಶಾಂತ ವಾತಾವರಣ ನಿರ್ಮಿಸಬೇಕಿದೆ. ಹೀಗಾಗಿ ಇಲ್ಲಿ ದುಡಿಯಲು ನನಗೆ ಹೆಮ್ಮೆಯಾಗುತ್ತಿದೆ. ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ’ ಎಂಬುದಾಗಿ ನೇಪಾಲಿ ಮೂಲದ ಜಿತು ರಾಯ್ ಖುಷಿಯಿಂದ ಹೇಳಿದರು.
ಇತ್ತೀಚಿನ ಭಾರತ-ಚೀನ ಗಡಿ ಸಂಘರ್ಷದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ‘ಕರೆ ಬಂದರೆ ಗಡಿ ಕರ್ತವ್ಯಕ್ಕೂ ಸೈ. ಕಠಿನ ಸನ್ನಿವೇಶದಲ್ಲಿ ತನ್ನ ತಂಡವನ್ನು ಹುರಿದುಂಬಿಸಿ ಮುನ್ನಡೆಸುವುದೇ ಸುಬೇದಾರ್ ಮೇಜರ್‌ನ ಕೆಲಸ. ಭಾರತೀಯ ಸೇನೆಯಲ್ಲಿ ದುಡಿಯಲು, ದೇಶಕ್ಕಾಗಿ ಸೇವೆ ಸಲ್ಲಿಸಲು ನಾನು ಯಾವತ್ತೂ ಸಿದ್ಧ. ನನಗೆ ಯಾವ ಹೆದರಿಕೆಯೂ ಇಲ್ಲ’ ಎಂದು 2016ರ ಖೇಲ್‌ರತ್ನ ಪ್ರಶಸ್ತಿ ವಿಜೇತ ಶೂಟರ್ ಹೆಮ್ಮೆಯಿಂದ ಹೇಳಿದರು. ಈ ವರ್ಷ ಅವರಿಗೆ ಪದ್ಮಶ್ರೀ ಗೌರವ ಕೂಡ ಒಲಿದು ಬಂದಿತ್ತು.
ಮಣಿಪುರದಲ್ಲಿ ಕರ್ತವ್ಯ
ಇಲ್ಲಿಯ ತನಕ ಪತ್ನಿ ಮತ್ತು 14 ತಿಂಗಳ ಮಗುವಿನೊಂದಿಗೆ ಜಿತು ರಾಯ್ ಇಂದೋರ್‌ನಲ್ಲಿದ್ದರು. ಇನ್ನು ಮಣಿಪುರಕ್ಕೆ ತೆರಳಿ ’11 ಗೂರ್ಖಾ ರೈಫಲ್ಸ್ ರೆಜಿಮೆಂಟ್’ ನಲ್ಲಿ ಕರ್ತವ್ಯ ನಿಭಾಯಿಸಲಿದ್ದಾರೆ.