ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಸ್ನೇಹಿತನನ್ನು ಕೊಲೆಗೈದಿದ್ದ ಆರೋಪಿ ಶೂಟರ್ ದಿಲೀಪ್ ಕಾಲಿಗೆ ಗುಂಡು ಹೊಡೆದು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೂಟರ್ ದಿಲೀಪ್ ಎರಡೂ ಕಾಲುಗಳಿಗೆ ಗುಂಡು ಹೊಡೆಯಲಾಗಿದ್ದು, ಆತನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಂಧಿಸಲು ತೆರಳಿದಾಗ ದಿಲೀಪ್‌ನಿಂದ ಹಲ್ಲೆಗೊಳಗಾಗಿರುವ ಪಿಎಸ್‌ಐ ರಘುಪ್ರಸಾದ್ ಹಾಗೂ ಪೊಲೀಸ್ ಪೇದೆ ತಿಮ್ಮರಾಜು ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜು. 13ರಂದು ರಾತ್ರಿ ನಡೆದಿದ್ದ ಸ್ನೇಹಿತ ಕಿರಣ್‌ನನ್ನು ಕೊಲೆಗೈದಿದ್ದ ದಿಲೀಪ್‌ನನ್ನು ಬಂಧಿಸಲಾಗಿತ್ತು. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ಗಾಣಿಗರಹಳ್ಳಿಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಹೀಗಾಗಿ ಸಂಜೆ 5.15ರ ಸುಮಾರಿಗೆ ದಿಲೀಪ್‌ನನ್ನು ಗಾಣಿಗರಹಳ್ಳಿಯ ಹೊರವಲಯಕ್ಕೆ ಕರೆದೊಯ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ.
ಹೀಗಾಗಿ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಕೇಳದೆ ಹಲ್ಲೆ ನಡೆಸಲು ಮುಂದಾಗಿದ್ದ. ಹೀಗಾಗಿ ಪ್ರಾಣರಕ್ಷಣೆ ಸಲುವಾಗಿ ಸರ್ವೀಸ್ ರಿವಾಲ್ವರ್‌ನಿಂದ ದಿಲೀಪನ ಎರಡೂ ಕಾಲುಗಳಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟು ತಿಂದು ಕುಸಿದು ಬಿದ್ದ ದಿಲೀಪ್‌ನನ್ನು ಬಂಧಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
“ಗಾಂಜಾ ಶೂಟರ್ ದಿಲೀಪ್’: ಗಾಂಜಾ ವ್ಯಸನಿಯಾಗಿರುವ ದಿಲೀಪ್ ಹೆಸರು ಪೀಣ್ಯ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಿದೆ. ಈ ಹಿಂದೆ ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದ್ದು, ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದ. ಪೀಣ್ಯ ಸುತ್ತಮುತ್ತಲ ಭಾಗಗಳಲ್ಲಿ ರೌಡಿಯಾಗಿ ಮೆರೆಯಬೇಕು ಎಂದು ಹೇಳಿಕೊಳ್ಳುತ್ತಿದ್ದ ದಿಲೀಪ್, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ. ಹಿಂದೊಮ್ಮೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಆಕೆಯ ಬಳಿ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಯಾವಾಗಲೂ ಗಾಂಜಾ ಮತ್ತಿನಲ್ಲಿದ್ದ ದಿಲೀಪ್, ಅಪರಾಧ ಜಗತ್ತಿನಲ್ಲಿ ಶೂಟರ್ ದಿಲೀಪ್ ಎಂದು ಕುಖ್ಯಾತಿ ಪಡೆದಿದ್ದ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್ ಹಣಕ್ಕೆ ನಡೆಯಿತಾ ಕೊಲೆ!: ಗಾರ್ಮೆಂಟ್ಸ್ ಉದ್ಯೋಗಿಯಾದ ಕಿರಣ್ ಹಾಗೂ ದಿಲೀಪ್‌ನ ಸ್ನೇಹಿತರಾಗಿದ್ದು, ಜತೆಯಲ್ಲಿಯೇ ಮದ್ಯಪಾನ ಸೇವಿಸುತ್ತಿದ್ದರು. ಕ್ರಿಕೆಟ್ ಬೆಟ್ಟಿಂಗ್ ಸಹ ಆಡುತ್ತಿದ್ದು, ಪಂದ್ಯವೊಂದರಲ್ಲಿ ಬೆಟ್ಟಿಂಗ್ ಗೆದ್ದಿದ್ದ ದಿಲೀಪ್‌ಗೆ ಕಿರಣ್ ಹಣ ನೀಡಬೇಕಿತ್ತು. ಆದರೆ, ಈ ಹಿಂದೆ ಕಿರಣ್‌ನಿಂಂದ ದಿಲೀಪ್ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಹಣಕಾಸು ವೈಷಮ್ಯಕ್ಕೆ ಇಬ್ಬರ ನಡುವೆಯೂ ಜಗಳ ನಡೆದಿತ್ತು. ಜು. 13ರಂದು ರಾತ್ರಿ ಕಿರಣ್‌ನನ್ನು ಕರೆಸಿ ಪಾರ್ಟಿ ಮಾಡಿದ್ದ ದಿಲೀಪ್, ಶಿವಪುರ ಕೆರೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಬ್ಬಿಣದ ರಾಡ್‌ನಿಂದ ಆತನ ತಲೆಗೆ ಹೊಡೆದು ಕೊಲೆಗೈದು ಪರಾರಿಯಾಗಿದ್ದ ಎಂದು ಹಿರಿಯ ಅಧಿಕಾರಿ ವಿವರಿಸಿದರು.