ಬೀದರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮವು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು.
ಮಕ್ಕಳು ತಮ್ಮ ವಿವಿಧ ಕಲಾ ಪ್ರತಿಭೆಗಳನ್ನು ಪ್ರದರ್ಶಿಸಿ ಸಭಿಕರ ಗಮನ ಸೆಳೆದರು.
ಶಿವಂ ಶಿವದಾಸ ಸ್ವಾಮಿ ಮತ್ತು ತಂಡದವರು ತಬಲಾ ಸೋಲೊ, ವರ್ಧನ ಎಸ್. ಎಖ್ಖೆಳ್ಳಿ ಹಾಗೂ ತಂಡ ವಚನ ಗಾಯನ, ಸಮೃದ್ಧಿ ಮತ್ತು ತಂಡ ಜನಪದ ಗೀತೆ, ದಿವ್ಯ ಹಾಗೂ ತಂಡ ನೃತ್ಯ ರೂಪಕ, ಪೂರ್ವಿಕಾ ಮತ್ತು ತಂಡ ಭರತನಾಟ್ಯ, ಸುಧಾರಾಣಿ ಹಾಗೂ ತಂಡ ವಾತ್ಸಲ್ಯ ನಾಟಕ, ದಿನೇಶ ಏಕಪಾತ್ರಾಭಿನಯ ಹಾಗೂ ಅಮೂಲ್ಯ ಶ್ರೀಮಂತ ಸಪಾಟೆ ಜಾನಪದ ನೃತ್ಯ ಪ್ರದರ್ಶಿಸಿದರು.
ಬಿಸಿಎಂ ಇಲಾಖೆ ಉಪ ನಿರ್ದೇಶಕ ಬಸವರಾಜ ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಗುರು ಕಾರ್ಯಕ್ರಮ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಸಹಕಾರಿಯಾಗಿದೆ ಎಂದರು.
ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಎಲ್ಲ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಮಕ್ಕಳಿಗೆ ವೇದಿಕೆ ಕಲ್ಪಿಸಲು ಇಲಾಖೆಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಸಾಹಿತಿ ಎಂ.ಜಿ. ಗಂಗನಪಳ್ಳಿ, ಹಿರಿಯ ಕಲಾವಿದ ಶಂಭುಲಿಂಗ ವಾಲೊªಡ್ಡಿ, ಉಪನ್ಯಾಸಕ ದೇವಿದಾಸ ಜೋಶಿ, ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ, ವಸತಿ ಶಾಲೆ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ ಇದ್ದರು.