ಹುಬ್ಬಳ್ಳಿ: ಹಳೇ ಹಬ್ಬಳ್ಳಿಯ ದೇವರ ಗುಡಿಹಾಳ ರಸ್ತೆಯ ಅಲ್ ತಾಜ್ ರೆಸ್ಟೋರೆಂಟ್ ಮುಂಭಾಗದಲ್ಲಿ ಅಪರಿಚಿತರಿಂದ ಗುಂಡಿನ ದಾಳಿಗೊಳಗಾಗಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗುರುವಾರ ಸಂಜೆ ಗುಡಿಹಾಳ ರಸ್ತೆಯಲ್ಲಿ ಮೂರು ಬೈಕ್ ಗಳಲ್ಲಿ ಬಂದ ಆರು ಜನ ದುಷ್ಕರ್ಮಿಗಳು ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಒಂದು ಗುಂಡು ಹಣೆಗೆ ಇನ್ನೊಂದು ತೊಡೆ ಭಾಗಕ್ಕೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮಗನ ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ. ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಹಾರಿಸುತ್ತಿದ್ದಂತೆ ಮೂರು ಬೈಕ್ ಗಳಲ್ಲಿ ಆಗಮಿಸಿದವರು ಪರಾರಿಯಾಗಿದ್ದಾರೆ. ಕೂಡಲೇ ಸಂಬಂಧಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಸಿಸಿ ಕ್ಯಾಮೆರಾದಲ್ಲಿ ದಾಖಲು: ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಗುಂಡು ಹಾರಿಸಿದ್ದು, ಹೊಟೇಲ್ ನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಂಬಂಧಿಕರನ್ನು ಕಾರಿಗೆ ಹತ್ತಿಸುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿ ಬೈಕ್ ಮೂಲಕ ಪರಾರಿಯಾಗಿದ್ದಾರೆ.
ಸಜೀವ ಗುಂಡು ಪತ್ತೆ: ಘಟನೆ ನಡೆದ ಸ್ಥಳದಲ್ಲಿ ಸಜೀವ ಗುಂಡು ಪತ್ತೆಯಾಗಿದೆ. ಇನ್ನೊಂದು ಕಡೆ ಹಾರಿಸಿದ ಗುಂಡಿನ ಎಮ್ಟಿ ಕೇಸ್ ಪತ್ತೆಯಾಗಿದೆ. ಸ್ಥಳದಿಂದ ಹಳೇ ಹುಬ್ಬಳ್ಳಿ ಪೊಲೀಸರು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.