ಚಿಕ್ಕಮಗಳೂರು: ನಾಗರಹಾವು ಕಚ್ಚಿ ಸಾವನ್ನಪ್ಪಿರುವ ಉರಗ ತಜ್ಞ ನರೇಶ್ ಅವರ ಮನೆಯಲ್ಲಿ ನೂರಾರು ವಿಷಕಾರಿ ಹಾವುಗಳು ಬುಧವಾರ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಸ್ನೇಕ್ ನರೇಶ್ ಮನೆಯಲ್ಲಿ ನಾಗರಹಾವುಗಳು, ಕೊಳಕುಮಂಡಲ ಹಾವುಗಳ ರಾಶಿ ಸೇರಿದಂತೆ ನೂರಾರು ಹಾವಿನ ಮರಿಗಳು ಪತ್ತೆಯಾಗಿವೆ.
ಮನೆಯಲ್ಲಿ ಹಾವುಗಳ ರಾಶಿ ಕಂಡು ಪೊಲೀಸರು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಇಲಾಖೆಯ ಸಿಬಂದಿ ಬ್ಯಾರಲ್, ಚೀಲಗಳಲ್ಲಿ ಸಂಗ್ರಹಿಸಿದ್ದ ನೂರಾರು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮನೆ ಸೇರಿದಂತೆ ಕಾರು, ಸ್ಕೂಟಿ ಗಳಲ್ಲೂ ನಾಗರಹಾವುಗಳು ಪತ್ತೆಯಾಗಿವೆ. ನೂರಾರು ಹಾವುಗಳು ಪತ್ತೆ ಹಿನ್ನೆಲೆ ಸ್ಥಳೀಯರು ಆತಂಕಗೊಂಡಿದ್ದಾರೆ.
ತಾನೇ ಸೆರೆ ಹಿಡಿದ ಹಾವು ಕಚ್ಚಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಖ್ಯಾತಿ ಪಡೆದಿದ್ದ ಸ್ನೇಕ್ ನರೇಶ್ (51) ಮಂಗಳವಾರ ಸಾವನ್ನಪ್ಪಿದ್ದರು. ಬೆಳಗ್ಗೆ ನಾಗರಹಾವು ಹಿಡಿದುಕೊಂಡು ಬಂದಿದ್ದ ನರೇಶ್ ಮಧ್ಯಾಹ್ನ ಮತ್ತೊಂದು ಹಾವು ಹಿಡಿಯಲು ಹೋಗುವ ವೇಳೆ ವೇಳೆ ಸ್ಕೂಟಿಯಲ್ಲಿದ್ದ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ್ದು ನಾಗರಹಾವು ಕಚ್ಚಿದ್ದು, ಆಸ್ಪತ್ರೆಗೆ ಬರುವಷ್ಟರಲ್ಲಿ ಸಾವನ್ನಪ್ಪಿದ್ದರು.