Advertisement

ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೃತ್ಯ: ಇದು ನಾಚಿಕೆಗೇಡು

06:00 AM May 10, 2018 | Team Udayavani |

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಾವಿರಾರು ಮತದಾನ ಗುರುತಿನ ಚೀಟಿ ಸಂಗ್ರಹಿಸಿ ಇಟ್ಟುಕೊಂಡಿರುವುದು ಇಡೀ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವಂಥ ಘಟನೆ. ಇಲ್ಲಿ ಸಿಕ್ಕಿರುವ ಎಲ್ಲಾ ಗುರುತಿನ ಚೀಟಿಗಳು ಅಸಲಿಯಾಗಿದ್ದೇ ಆದರೆ, ಅವು ಬಂದದ್ದು ಎಲ್ಲಿಂದ ಎಂಬುದು ಮೂಲಭೂತ ಪ್ರಶ್ನೆ. ಒಂದು ವೇಳೆ ರಾಜಕೀಯ ನಾಯಕರು ಮತದಾರರಿಗೆ ಆಮಿಷ ನೀಡುವ ಸಲುವಾಗಿಯೇ ಈ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾದರೆ ಇಡೀ ಚುನಾವಣಾ ಪ್ರಕ್ರಿಯೆ ಮೇಲೆ ಕರಿನೆರಳು ಬೀಳುವುದು ಖಂಡಿತ. 

Advertisement

ಇದುವರೆಗಿನ ಚುನಾವಣಾ ಅಕ್ರಮಗಳು ಹಣ, ಹೆಂಡ, ಚಿನ್ನ, ಸೀರೆ ಸೇರಿದಂತೆ ವಿವಿಧ ವಸ್ತುಗಳ ಹಂಚಿಕೆ ರೂಪದಲ್ಲಿ ವರದಿಯಾಗುತ್ತಿದ್ದವು. ಆದರೆ, ಈ ವೋಟರ್‌ ಐಡಿ ಅಕ್ರಮ ಹೊಸ ಮಾದರಿಯದ್ದಾಗಿದ್ದು ಮತದಾರ ತನ್ನ ಹಕ್ಕನ್ನೇ ಕಳೆದುಕೊಳ್ಳುವ ಅಥವಾ ಇದುವರೆಗೆ ಆತ ತನ್ನ ಮತದ ಹಕ್ಕಿನ ಮೇಲೆ ಇಟ್ಟಿರುವ ನಂಬಿಕೆಗೆ ಕೊಡಲಿಪೆಟ್ಟು ನೀಡುವಂಥದ್ದಾಗಿದೆ. ಹೀಗಾಗಿ ಚುನಾವಣಾ ಆಯೋಗ ಯಾವುದೇ ಮೀನಮೇಷ ಎಣಿಸದೇ, ಯಾವುದೇ ರಾಜಕೀಯ ಪ್ರಭಾವಕ್ಕೂ ಒಳಗಾಗದೇ ಕೂಲಂಕಶ ತನಿಖೆ ನಡೆಸಿ ಚುನಾವಣಾ ಪ್ರಕ್ರಿಯೆ ಮುಂದುವರೆಸುವ ಅಥವಾ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕಾಗಿದೆ.    

ಈ ವೋಟರ್‌ ಐಡಿ ಸಂಗ್ರಹದ ಪ್ರಕರಣ ಬಯಲಾದ ನಂತರ ನಡೆದ ರಾಜಕೀಯ ಹೈಡ್ರಾಮಾಗಳು ಜನರ ಮನಸ್ಸಿಗೆ ಆಘಾತ ಉಂಟು ಮಾಡುವಂಥದ್ದು. ಗುರುತಿನ ಚೀಟಿ ಸಿಕ್ಕಿರುವ ಆರ್‌ಆರ್‌ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಅಪಾರ್ಟ್‌ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಇದು ಕಾಂಗ್ರೆಸ್‌ಗೆ ಸೇರಿದ್ದು ಎಂದು ಹೇಳಿದ್ದರೆ, ಕಾಂಗ್ರೆಸ್‌ ನಾಯಕರು ಫ್ಲ್ಯಾಟ್‌ ಬಿಜೆಪಿ ಮುಖಂಡರಿಗೇ ಸೇರಿದ್ದು ಎಂದು ಪ್ರತಿಸವಾಲು ಹಾಕಿದ್ದಾರೆ. ಆದರೆ, ಪಕ್ಷಗಳ ನಡುವಿನ ಈ ವಾಕ್ಸಮರ ಜನರಲ್ಲಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿ ಚುನಾವಣಾ ವ್ಯವಸ್ಥೆ ಮೇಲಿನ ಅವರ ನಂಬಿಕೆ ಕಡಿಮೆಯಾಗಲು ಕಾರಣವಾಗಬಾರದು. ಹಾಗೆಯೇ ಮತದಾನಕ್ಕೆ ಕೇವಲ ಎರಡೇ ದಿನ ಬಾಕಿ ಇರುವಾಗ ಇಂಥ ಗೊಂದಲಗಳು ಹೆಚ್ಚಾಗಬಾರದು. 9,746 ಅಸಲಿ ಮತಪತ್ರಗಳು ಒಂದೇ ಕಡೆ ಸಿಗುತ್ತವೆ ಮತ್ತು ಅವುಗಳನ್ನು ಯಾರೋ ಒಬ್ಬ ವ್ಯಕ್ತಿ ಸಂಗ್ರಹಿಸಿದ್ದಾರೆ ಎನ್ನುವುದು ದೊಡ್ಡ ಅಪರಾಧ. ಪ್ರತಿಯೊಬ್ಬರ ಮತಚೀಟಿಗಳು ಅವರ ಬಳಿ ಇರಬೇಕೇ ಹೊರತು, ಈ ಪ್ರಮಾಣದಲ್ಲಿ ಬೇರೊಬ್ಬರು ಸಂಗ್ರಹಿಸಿ ಇಟ್ಟುಕೊಳ್ಳಬಾರದು. ಅಲ್ಲದೆ, 9,746 ಎಂಬುದು ಪುಟ್ಟ ಸಂಖ್ಯೆಯೇನಲ್ಲ. ಈ ಸಂಖ್ಯೆ ಇಡೀ ಕ್ಷೇತ್ರದ ಫ‌ಲಿತಾಂಶವನ್ನೇ ಬದಲಿಸುವ ಶಕ್ತಿಯುಳ್ಳದ್ದೂ ಆಗಿದೆ. ಇಂಥ ವಿಚಾರದಲ್ಲಿ ಚುನಾವಣಾ ಆಯೋಗ ಕೂಡ ತ್ವರಿತಗತಿಯಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು.  ಚುನಾವಣಾ ಅಕ್ರಮ ವಿಚಾರದಲ್ಲಿ ಇದುವರೆಗೆ ಕರ್ನಾಟಕ ತೀರಾ ಕೆಟ್ಟ ರೀತಿಯ ಅನುಭವ ಎದುರಿಸಿಲ್ಲ. ಆದರೆ ನೆರೆಯ ತಮಿಳುನಾಡಿನಲ್ಲಿ ಚುನಾವಣಾ ಅಕ್ರಮಗಳು ರಾಜಾರೋಷವಾಗಿ ನಡೆದು ಚುನಾವಣಾ ಪ್ರಕ್ರಿಯೆಗಳೇ ರದ್ದಾದ ಉದಾಹರಣೆಗಳು ಸಾಕಷ್ಟಿವೆ. ಜಯಲಲಿತಾ ಸಾವಿನ ನಂತರ ನಡೆದ ಆರ್‌.ಕೆ.ನಗರ ಕ್ಷೇತ್ರದ ಉಪಚುನಾವಣೆ ಕೂಡ ಇಂಥದ್ದೇ ಚುನಾವಣಾ ಅಕ್ರಮಗಳಿಗೆ ಸಾಕ್ಷಿಯಾಗಿ ರದ್ದಾಗಿತ್ತಲ್ಲದೇ ಏಳೆಂಟು ತಿಂಗಳುಗಳ ಕಾಲ ಮತದಾನವೇ ನಡೆಯಲಿಲ್ಲ. 2016ರಲ್ಲೂ ತಂಜಾವೂರು ಮತ್ತು ಅರವ್‌ಕುರುಚಿ ಕ್ಷೇತ್ರಗಳ ಚುನಾವಣೆಯನ್ನೂ ಭಾರಿ ಹಣದ ಹಂಚಿಕೆಯ ಆರೋಪದ ಮೇಲೆ ಕೇಂದ್ರ ಚುನಾವಣಾ ಆಯೋಗ ರದ್ದು ಮಾಡಿತ್ತು. ಈ ಮೂರು ಘಟನೆಗಳೂ ತಮಿಳುನಾಡಿನ ರಾಜಕೀಯ ವಿದ್ಯಮಾನವನ್ನೇ ಸಂದೇಹಿಸುವಂಥದ್ದಕ್ಕೆ ಕಾರಣವಾಗಿದ್ದವು.  

ಇದೀಗ ಕರ್ನಾಟಕದಲ್ಲೂ ಇಂಥದ್ದೇ ಅವಮಾನಕಾರಿ ಪ್ರಸಂಗ ಎದುರಾಗಿದೆ. ಈ ಮತಚೀಟಿಗಳ ಅಕ್ರಮ ಸಂಗ್ರಹ ಘಟನೆ ರಾಜ್ಯದ ಹೆಸರಿಗೆ ಮಸಿ ಬಳಿದಿದೆ. ಕರ್ನಾಟಕದ ಮರ್ಯಾದೆ ಉಳಿವ ಸಲುವಾಗಿಯಾದರೂ ಚುನಾವಣಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಮತಚೀಟಿಗಳು ಅಲ್ಲಿ ಬಂದು ಸೇರಿದ್ದು ಹೇಗೆ ಎಂಬ ಬಗ್ಗೆ ಆಯೋಗವೇ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next