Advertisement
ಹಿಮಾಚಲ ಪ್ರದೇಶಜೂ.24ರಿಂದ ಈವರೆಗೆ ಮಳೆ ಸಂಬಂಧಿ ಅವಘಡಗಳಿಗೆ 43 ಮಂದಿ ಬಲಿಯಾಗಿದ್ದಾರೆ. 352 ಕೋಟಿ ರೂ. ನಷ್ಟ ಉಂಟಾಗಿದೆ. ಶನಿವಾರ ಮತ್ತು ಭಾನುವಾರ ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಒಂದೇ ದಿನ 204 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಲನ್ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಿಂದ ಮೂರು ಮನೆಗಳು ಕುಸಿದುಬಿದ್ದಿವೆ. ದಿಢೀರ್ ಪ್ರವಾಹ ಉಂಟಾಗುವ ಭೀತಿಯೂ ಎದುರಾಗಿದೆ.
ಝೇಲಂ ನದಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದ್ದು, ತೀರ ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಪೂಂಛ… ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ನಾಲೆಯೊಂದಕ್ಕೆ ಜಾರಿ ಬಿದ್ದು ಇಬ್ಬರು ಯೋಧರು ಅಸುನೀಗಿದ್ದಾರೆ. ರಾತ್ರಿಪೂರ್ತಿ ಮಳೆಯಾದ ಕಾರಣ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮತ್ತು ಮುಘಲ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಮಹಾರಾಷ್ಟ್ರ
ರಾಜಧಾನಿ ಮುಂಬಯಿ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. ವಾರಾಂತ್ಯದ ಮಳೆಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿ ಸಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
Related Articles
ದಿಲ್ಲಿಯಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಸಂಚಾರ ದಟ್ಟಣೆ, ರಸ್ತೆ-ರೈಲು ಸಂಚಾರ ವ್ಯತ್ಯಯ ಉಂಟಾಯಿತು. ಹಲವು ರಸ್ತೆಗಳು ಮುಳುಗಡೆಯಾ ದವು. ಭಾನುವಾರವೂ ಭಾರೀ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ.
Advertisement
ಕೇರಳದೇವರ ನಾಡಲ್ಲಿ ಮಳೆಯಬ್ಬರ ಮುಂದುವರಿದಿದೆ. ಪರಿಹಾರ ಶಿಬಿರಗಳ ಸಂಖ್ಯೆಯನ್ನು 186ಕ್ಕೆ ಹೆಚ್ಚಳ ಮಾಡಲಾಗಿದೆ. ಶುಕ್ರವಾರದವರೆಗೆ ಒಟ್ಟು 8 ಮಂದಿ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾಗಿದ್ದಾರೆ. ಕಲ್ಲಿಕೋಟೆ, ವಯನಾಡ್, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಶನಿವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಅಮರನಾಥ ಯಾತ್ರೆ ಸ್ಥಗಿತ; ಸಾವಿರಾರು ಮಂದಿ ಅತಂತ್ರ
ನಿರಂತರ ಮಳೆ, ಭೂಕುಸಿತದ ಹಿನ್ನೆಲೆಯಲ್ಲಿ ಸತತ 2ನೇ ದಿನವೂ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗುಹಾಂತರ ದೇಗುಲದತ್ತ ಹೊರಟಿದ್ದ ಸಾವಿರಾರು ಮಂದಿ ಯಾತ್ರಿಕರು ಜಮ್ಮು ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಯಾರೂ ಆತಂಕಕ್ಕೆ ಒಳಗಾಗಬೇಡಿ. ಹಿರಿಯ ಅಧಿಕಾರಿಗಳು ಪರಿಸ್ಥಿತಿ ಪರಿಶೀಲಿಸುತ್ತಿ ದ್ದಾರೆ’ ಎಂದಿದ್ದಾರೆ. ಭಗವತಿ ನಗರ ಬೇಸ್ ಕ್ಯಾಂಪ್‌ನಿಂದಲೂ ಯಾತ್ರಿಕರ ತಂಡಕ್ಕೆ ಹೊರಡಲು ಅವಕಾಶ ಕೊಟ್ಟಿಲ್ಲ. ಭೂಕುಸಿತದಿಂದ ಪಂಥಿಯಾಲ್ ಸುರಂಗದಲ್ಲಿ ರಸ್ತೆಯ ಒಂದು ಭಾಗವೇ ಕೊಚ್ಚಿ ಹೋಗಿದೆ. ಜು.14ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.