ಬೆಂಗಳೂರು:ಯಶವಂತಪುರ ಕ್ಷೇತ್ರಕ್ಕೆ ಶೋಬಾ ಕರಂದ್ಲಾಜೆ ಆವರನ್ನೇ ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಯಶವಂತಪುರದಲ್ಲಿ ಬಿಜೆಪಿ ಗೆಲ್ಲಬೇಕಾದರೆ ಶೋಭಾ ಕರಂದ್ಲಾಜೆ ಅವರೇ ಸೂಕ್ತ ಅಭ್ಯರ್ಥಿ ಎಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹೀಗಾಗಿ, ಶೋಭಾ ಕರಂದ್ಲಾಜೆ ಅವರನೇ ಅಂತಿಮ ಕ್ಷಣದಲ್ಲಿ ಸ್ಪರ್ಧೆಗಿಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಆದರೆ, ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟರೆ ತಮಗೂ ಕೊಪ್ಪಳದಿಂದ ಟಿಕೆಟ್ ನೀಡಬೇಕು ಎಂದು ಸಂಸದ ಕರಡಿ ಸಂಗಣ್ಣ ಪಟ್ಟು ಹಿಡಿದಿದ್ದು ಇಲ್ಲದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಜತೆಗೆ ಬೆಂಗಳೂರಿನ ಗಾಂಧಿನಗರದಿಂದ ಮತ್ತೂಬ್ಬ ಸಂಸದ ಪಿ.ಸಿ.ಮೋಹನ್ ಟಿಕೆಟ್ ಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನೆ.ಲ.ನರೇಂದ್ರಬಾಬು ಅವರಿಗೆ ಟಿಕೆಟ್ ಘೋಷಿಸಿದ್ದು, ಆಕಾಂಕ್ಷಿಗಳ ಆಕ್ರೋಶ ಹಿನ್ನೆಲೆಯಲ್ಲಿ ಅವರ ಬದಲಿಗೆ ಮಾಜಿ ಉಪ ಮೇಯರ್ ಹರೀಶ್ ಅಥವಾ ಎಂ.ನಾಗರಾಜ್ ಅವರಿಗೆ ಸಿಗಲಿದೆ . ನರೇಂದ್ರಬಾಬು ಅವರನ್ನು ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರನ್ನು ಯಶವಂತಪುರದಿಂದ ಕಣಕ್ಕೆ ಇಳಿಸುವ ವಿಚಾರ ಚರ್ಚೆ ನಡೆದಿದೆ. ಆದರೆ, ಎಲ್ಲವನ್ನೂ ಮಾಧ್ಯಮಕ್ಕೆ ತಿಳಿಸಲು ಆಗಲ್ಲ. ಅಮಿತ್ ಶಾ ಅವರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು.