Advertisement

ಬಿಜೆಪಿಯಿಂದ ಅಡಕೆ ಬೆಳೆಗಾರರ ಹಿತ ಕಾಯುವ ಕಾರ್ಯ: ಕರಂದ್ಲಾಜೆ  

10:54 PM Feb 20, 2023 | Team Udayavani |

ಕೊಪ್ಪ: ಅಡಕೆ ಆಮದು ನೀತಿ ಕಾಂಗ್ರೆಸ್‌ ಪಕ್ಷದ ಕೊಡುಗೆ. ಇವರ ಸರಕಾರವಿದ್ದಾಗ ಶೂನ್ಯ ತೆರಿಗೆಯಲ್ಲಿ ಆಮದು-ರಫ್ತು ಮಾಡಬೇಕಾಗಿತ್ತು. ಇದು ಅಡಕೆ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗದಂತೆ ಮಾಡಿತ್ತು. ಆದರೆ ಈಗ ಆಮದು ಸುಂಕ ಹೆಚ್ಚಳ ಮಾಡಿ ಬೆಳೆಗಾರರ ಹಿತ ಕಾಯಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕೊಪ್ಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತಿಯಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಆಮದು ಶುಲ್ಕ ಹೆಚ್ಚಳ ಮಾಡಬೇಕು ಹಾಗೂ ಅಡಕೆ ಭವಿಷ್ಯ ಸುಪ್ರೀಂಕೋರ್ಟ್‌ನಲ್ಲಿದ್ದು ರಕ್ಷಣೆ ಮಾಡುವಂತೆ ಪ್ರಧಾನಿ ಮೋದಿ ಅವರ ಬಳಿ ನಿಯೋಗ ಹೋದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆಮದು ಶುಲ್ಕ ಏರಿಕೆ ಮಾಡುವುದರಿಂದ ದೇಶೀಯ ಅಡಕೆಗೆ ಬೆಲೆ ಬರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದೆವು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಮದು ಸುಂಕ ಹೆಚ್ಚಳ ಮಾಡಿದ್ದಾರೆ ಎಂದರು.

ಎಲೆಚುಕ್ಕಿ ರೋಗ ಮತ್ತು ಹಳದಿ ಎಲೆರೋಗದಿಂದ ಸಾವಿರಾರು ಎಕರೆ ತೋಟಗಳು ನಾಶವಾಗಿದ್ದು, ವಿಜ್ಞಾನಿಗಳು ಔಷ ಧ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಎಲೆಚುಕ್ಕಿ ರೋಗ ಸಂಬಂಧ ಕೇಂದ್ರ ಸರ್ಕಾರ ವಿಜ್ಞಾನಿಗಳ ತಂಡ ರಚಿಸಿದೆ. ಅವರು ಇಲ್ಲಿಗೆ ಬಂದು ಪರಿಶೀಲಿಸಿ ಚರ್ಚಿಸಿದ್ದಾರೆ. ಸಂಶೋಧನೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅದಕ್ಕೆ ಬದ್ಧವಾಗಿದೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗುಟ್ಕಾ ಬ್ಯಾನ್‌ ಮಾಡಲಾಯಿತು. ನಾವು ತಂಬಾಕು, ಸಿಗರೇಟು ಬ್ಯಾನ್‌ ಮಾಡಿ ಎಂದು ಆಗ್ರಹಿಸಿದರೆ ಅವರು ಮಾತು ಕೇಳಲಿಲ್ಲ . ಕರ್ನಾಟಕದಲ್ಲಿ ಅಡಕೆಗೆ ವಿಷ ಹಾಕಿದ್ದು ಕಾಂಗ್ರೆಸ್‌ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಸೇರಿದಂತೆ ಅಡಕೆ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಕೆ ವಾಣಿಜ್ಯ ಬೆಳೆಯಲ್ಲ, ಅಡಕೆಗೆ ಪುರಾತನವಾದ ಹಿನ್ನೆಲೆ, ವೈಶಿಷ್ಟ್ಯ ಇದೆ. ಹಿಂದಿನ ಸರ್ಕಾರಗಳು ಅಡಕೆಗೆ ಮಾನ-ಮರ್ಯಾದೆ ಕೊಡುವ ಕೆಲಸ ಮಾಡಲಿಲ್ಲ. ಅಡಕೆ ನಂಬಿಕೊಂಡ ರೈತರಷ್ಟೇ ಅಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಅವರೆಲ್ಲರೂ ಇಂದು ಚಿಂತಿಸುವಂತಾಗಿದೆ ಎಂದರು.

Advertisement

ಅಡಕೆ ಕ್ಯಾನ್ಸರ್‌ಕಾರಕ ಎಂದು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಅಂದಿನ ಕಾಂಗ್ರೆಸ್‌ ಸರ್ಕಾರ. ಅಡಕೆ ಕ್ಯಾನ್ಸರ್‌ಕಾರಕವಲ್ಲ. ಅದು ಉತ್ತಮ ಬೆಳೆಯಾಗಿದ್ದು ಆಯುರ್ವೇದೀಯ ಅಂಶಗಳನ್ನು ಒಳಗೊಂಡಿದೆ. ಅಡಕೆಗೆ ಹಳದಿ ರೋಗ ಬಂದು ನೂರಾರು ವರ್ಷಗಳಾಗಿದೆ. ಕೊರೊನಾಕ್ಕೆ ಎರಡು ವರ್ಷದಲ್ಲಿ ಔಷಧಿ ಕಂಡು ಹಿಡಿಯುವುದಾದರೆ ಹಳದಿಎಲೆ ರೋಗಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪರಿಸರ ವೈಪರೀತ್ಯ ಬೆಳೆವಿಮೆ ಈ ಹಿಂದೆ ಮೂರು ದಿನಗಳ ಅವಧಿಗೆ ಬರುತ್ತಿತ್ತು. ಕಳೆದ ವರ್ಷ ಐದು ದಿನಕ್ಕೆ ಮಾಡಲಾಗಿದೆ. ಈ ವರ್ಷ ಏಳು ದಿನ ಸತತ ಮಳೆಬಂದರೆ ಮಾತ್ರ ಕೊಡುತ್ತೇವೆಂದು ಹೇಳಿದ್ದರಿಂದ ಮಲೆನಾಡಿನ ಚಿಕ್ಕಮಗಳೂರು ಮತ್ತು ಶೃಂಗೇರಿ ರೈತರಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಬೆಳೆ ವಿಮೆ ನಿಗದಿ ಅವಧಿಯನ್ನು ಸರಿಪಡಿಸಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ವಕೀಲರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಇಂದಿರಾ ಜೈ ಸಿಂಗ್‌ ಅವರು ಅಡಕೆಯನ್ನು ವಿಷಕಾರಕ ವಸ್ತು ಎಂದು ಹೇಳಿದರು. ಅವರು ಗುಟ್ಕಾವನ್ನು ಕ್ಯಾನ್ಸರ್‌ಕಾರಕ ಎಂದು ಹೇಳಲಿಲ್ಲ. ಅಡಕೆ ಸಾಂಪ್ರದಾಯಿಕ ಬೆಳೆಯಾಗಿದ್ದು ಅಡಕೆ ತಿಂದು ನಮ್ಮ ಹಿರಿಯರು ನೂರಾರು ವರ್ಷ ಬದುಕಿದ್ದರು. ಅಂತಹ ಅಡಕೆಯನ್ನು ವಿಷಕಾರಕ ಎಂದು ಹೇಳಿದ್ದು ಕಾಂಗ್ರೆಸ್‌. ಸುಳ್ಳು ಹೇಳಿ ಮಾನ ಉಳಿಸಿಕೊಳ್ಳಬಹುದು ಎಂದು ಕಾಂಗ್ರೆಸ್‌ ಪ್ರಯತ್ನಿಸಿದರೆ ಸುಳ್ಳನ್ನೇ ಮನೆ ದೇವರು ಮಾಡಿಕೊಳ್ಳಬಹುದು ಹೊರತು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದರು.

ಅಡಕೆ ಹಳದಿ ಎಲೆರೋಗಕ್ಕೆ ಔಷಧ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಈಗ 10 ಕೋಟಿ ರೂ. ನೀಡಿದೆ. ಎಲೆಚುಕ್ಕಿ ರೋಗ ಕೀಟರೋಧಕಕ್ಕೆ ಔಷ ಧಿ ಸಿಂಪಡಿಸಲು 10 ಕೋಟಿ ಮೀಸಲಿಟ್ಟಿದ್ದು ಬಿಜೆಪಿ ಸರ್ಕಾರ ಎಂದ ಅವರು, ಕಾಂಗ್ರೆಸ್‌ನವರು ಸುಳ್ಳಿನ ಮೂಲಕ ಸತ್ಯ ಮರೆಮಾಚಬಹುದು ಎಂದಿದ್ದರೆ ಅದು ಸಾಧ್ಯವಿಲ್ಲ ಎಂದರು.

ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ವಿಭಾಗ ಪ್ರಭಾರಿ ಗಿರೀಶ್‌ ಕಾರಂತ್‌, ಜಿಲ್ಲಾ ಪ್ರಭಾರಿ ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಸತೀಶ್‌, ಅರುಣ್‌ ಕುಮಾರ್‌, ಉಮೇಶ್‌, ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಬಿ.ರಾಜಪ್ಪ, ಕ್ಷೇತ್ರದ ಮೂರೂ ಮಂಡಲಗಳ ಅಧ್ಯಕ್ಷರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next