ಕರಾಚಿ: ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಮಂಗಳವಾರದ ಟೀವಿ ಕಾರ್ಯಕ್ರಮವೊಂದರ ನಡುವೆಯೇ ಹೊರ ನಡೆದಿದ್ದಾರೆ.
ಪಾಕ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ಸಂಭ್ರಮದಲ್ಲಿ ಅಲ್ಲಿನ ಸರಕಾರಿ ಟೀವಿ ವಾಹಿನಿ “ಪಿಟಿವಿ’ಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಈ ಅವಾಂತರ ನಡೆಯಿತು.
ಪಿಟಿವಿ ಕ್ರೀಡಾ ವಿಭಾಗದ ಮುಖ್ಯಸ್ಥ, ನಿರೂಪಕ ಡಾ. ನೌಮನ್ ನಿಯಾಜ್ ಅವರು ಪಾಕ್ ಚೇಸಿಂಗ್ ಆಯ್ಕೆ ಮಾಡಿದ್ದು ಸ್ವಲ್ಪ ಇಕ್ಕಟ್ಟಿನ ನಿರ್ಧಾರವಲ್ಲವೇ ಎಂದು ಅಖ್ತರ್‌ಗೆ ಪ್ರಶ್ನಿಸಿದ್ದರು. ಆದರೆ ಅಖ್ತರ್ ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಇದರ ಬದಲು ಪಾಕ್ ಗೆಲುವಿಗೆ ಕಾರಣವಾದ ವೇಗಿ ಹ್ಯಾರಿಸ್ ರವೂಫ್ ಅವರನ್ನು ಹೊಗಳಿದರು. ಹಾಗೆಯೇ ಅವರನ್ನು ತರಬೇತುಗೊಳಿಸಿದ ಆಖೀಬ್ ಜಾವೇದ್ ಅವರ ಗುಣಗಾನ ಮಾಡಿದರು.
ಇದನ್ನೂ ಓದಿ:ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್ ಅಭಿನಂದನೆ
ತಮ್ಮ ಪ್ರಶ್ನೆಗೆ ಉತ್ತರವೇ ಸಿಗದಿದ್ದಾಗ ನೌಮನ್ ಸಿಟ್ಟಾದರು, “ನೀವು ಬಹಳ ಬುದ್ಧಿವಂತಿಕೆ ತೋರಿಸುತ್ತಿದ್ದೀರಿ, ಬೇಕಾದರೆ ಈ ಕಾರ್ಯಕ್ರಮ ದಿಂದ ಹೊರ ನಡೆಯಬಹುದು’ ಎಂದುಬಿಟ್ಟರು. ಇದರಿಂದ ಬೇಸರಗೊಂಡ ಅಖ್ತರ್ ಕಾರ್ಯಕ್ರಮದಿಂದ ಎದ್ದು ಹೋದರಷ್ಟೇ ಅಲ್ಲ, ತಮ್ಮ ಕ್ರಿಕೆಟ್ ವಿಶ್ಲೇಷಕ ಸ್ಥಾನಕ್ಕೂ ರಾಜೀನಾಮೆ ನೀಡಿದರು!
ಸಾಮಾಜಿಕ ಜಾಲತಾಣಗಳಲ್ಲಿ ಅಖ್ತರ್ ನಡೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.