ಮುಂಬೈ: ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ವಿಡಿಯೋಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಭಾರತದ ಪ್ರತಿ ಸರಣಿಯ ನಂತರ ವಿಡಿಯೋ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ರಾವಲ್ಪಿಂಡಿ ಎಕ್ಸ್ ಪ್ರೆಸ್ ಅಖ್ತರ್ ಈಗ ಹೊಸ ವಿಡಿಯೋ ಮಾಡಿದ್ದಾರೆ.
ರವಿವಾರವಷ್ಟೇ ಅಂತ್ಯವಾದ ಭಾರತ – ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಬಗ್ಗೆ ಅಖ್ತರ್ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾಗೆ ಹಲವು ತಿಂಗಳಿನಿಂದ ಕಾಡುತ್ತಿದ್ದ ಒಂದು ಸಮಸ್ಯೆಗೆ ಅಖ್ತರ್ ಉತ್ತರ ನೀಡಿದ್ದಾರೆ. ಅದುವೇ ಧೋನಿಯ ಉತ್ತರಾಧಿಕಾರಿಯ ಬಗ್ಗೆ.
ಆಸ್ಟ್ರೇಲಿಯಾ ಸರಣಿಗಿಂತ ಮೊದಲು ರಿಷಭ್ ಪಂತ್ ಧೋನಿಯ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಆಸೀಸ್ ಸರಣಿಯಲ್ಲಿ ರಾಹುಲ್ ಮತ್ತು ಮನೀಷ್ ಪಾಂಡೆಗೆ ಈ ಸ್ಥಾನ ನೀಡಲಾಗಿತ್ತು. ಭವಿಷ್ಯದಲ್ಲಿ ಧೋನಿಯ ಜಾಗವನ್ನು ಯಾರು ತುಂಬಬೇಕೆಂದು ಅಖ್ತರ್ ಹೇಳಿಕೊಂಡಿದ್ದಾರೆ.
ಭಾರತ ತಂಡಕ್ಕೆ ಧೋನಿಯ ಉತ್ತರಾಧಿಕಾರಿ ಸಿಕ್ಕಿದ್ದಾರೆ. ಆಸೀಸ್ ಸರಣಿಯಲ್ಲಿ ಮನೀಷ್ ಪಾಂಡೆ ಉತ್ತಮವಾಗಿ ಕಂಡರು. ಶ್ರೇಯಸ್ ಅಯ್ಯರ್ ಕೂಡಾ ಓರ್ವ ಪರಿಪೂರ್ಣ ಆಟಗಾರನಾಗುತ್ತಿದ್ದಾನೆ. ಇವರಿಬ್ಬರು ಭಾರತದ ಬ್ಯಾಟಿಂಗ್ ಗೆ ಶಕ್ತಿ ತುಂಬಿದ್ದಾರೆ ಎಂದು ಅಖ್ತರ್ ಗುಣಗಾನ ಮಾಡಿದ್ದಾರೆ.
ಇವರಿಬ್ಬರು ಸಾಕಷ್ಟು ಐಪಿಎಲ್ ಆಡಿದ್ದಾರೆ. ಹಾಗಾಗಿ ಇವರಿಗೆ ಒತ್ತಡದ ಪರಿಸ್ಥಿತಿ ನಿಭಾಯಿಸಿ ಚೆನ್ನಾಗಿ ಗೊತ್ತಿದೆ. ಎದುರಾಳಿ ಎಷ್ಟೇ ಬಲಿಷ್ಠವಾಗಿರಲಿ, ಇವರು ತಮ್ಮ ಇನ್ನಿಂಗ್ಸ್ ಆಡುತ್ತಾರೆ ಎನ್ನುವುದು ಪಾಕ್ ಮಾಜಿ ವೇಗಿಯ ಅಭಿಪ್ರಾಯ.