Advertisement

ಭಾರತವನ್ನು ಇನ್ನು ತಡೆಯಲು ಸಾಧ್ಯವಿಲ್ಲ !

01:04 AM Jan 20, 2021 | Team Udayavani |

ನಾನು ಇತ್ತೀಚೆಗೆ ನನ್ನ ವೀಡಿಯೋಗಳಲ್ಲಿ “ಫಿಟ್‌ ಆಗಿರುವ ಆಸ್ಟ್ರೇಲಿಯಾದ “ಪೂರ್ತಿ’ ತಂಡಕ್ಕಿಂತ, ಹೊಸಬರನ್ನೇ ಹೊಂದಿರುವ ಭಾರತದ “ಅರ್ಧ’ ತಂಡ ಬಹಳ ಬಲಿಷ್ಠವಾಗಿದೆ. ಅದು ಈ ಸಿರೀಸ್‌ ಗೆಲ್ಲಲಿದೆ” ಎಂದು ಹೇಳಿದ್ದೆ. ಹೀಗೆ ಹೇಳಿದಾಗ ಅನೇಕರು ನನ್ನನ್ನು ಪ್ರಶ್ನಿಸಿದ್ದರು. ನನ್ನ ಮಾತು ಕೇಳಿ ನಕ್ಕಿದ್ದರು. ಖುದ್ದು ಭಾರತದ ಕೆಲವು ಗೆಳೆಯರೂ ಸಹ, ಶೋಯೆಬ್‌ ಮುಜುಗರ ಆಗೋ ರೀತಿಯಲ್ಲಿ ಮಾತನಾಡುತ್ತಿದ್ದೀಯಲ್ಲ ಎಂದಿದ್ದರು! “ಬಲಿಷ್ಠ ಆಸ್ಟ್ರೇಲಿಯನ್‌ ತಂಡ ಭಾರತವನ್ನು ಸೋಲಿಸಲಿದೆ’ ಎಂದೇ ಎಲ್ಲರೂ ಹೇಳಿದ್ದರು.

Advertisement

ಆದರೆ ಭಾರತ ಪುಟಿದು ನಿಂತಿದೆ ಎನ್ನುವುದನ್ನು ನಾನು ಈ ಮೊದಲೇ ಗಮನಿಸಿದ್ದೆ. ಒಂದು ವೇಳೆ ಭಾರತವೇನಾದರೂ ಈ ಟೆಸ್ಟ್‌ ಪಂದ್ಯಾವಳಿಯಲ್ಲಿ ಗೆಲುವು ಪಡೆಯಿತು ಎಂದರೆ ಅದೊಂದು ಐತಿಹಾಸಿಕ ಗೆಲುವಾಗಲಿದೆ ಎನ್ನುವುದು ತಿಳಿದಿತ್ತು. ನೀವು ಗಮನಿಸಿ ನೋಡಿ, ಪೂರ್ತಿ ಗಾಯಾಳುಗಳೊಂದಿಗೇ ಭಾರತ ತಂಡ ಆಟಕ್ಕಿಳಿಯಿತು. ಆದರೂ ಮೀಸಲು ಆಟಗಾರರಾಗಿದ್ದ ಚಿಕ್ಕ ಹುಡುಗರೆಲ್ಲ ಸೇರಿ ಆಸ್ಟ್ರೇಲಿಯಾದಂಥ ಬಲಿಷ್ಠ ತಂಡವನ್ನು ಕೆಡವಿಹಾಕಿದರು. ರಿಷಭ್‌ ಪಂತ್‌ ಅಂತೂ ಆಸ್ಟ್ರೇಲಿಯಾವನ್ನು ಜಜ್ಜಿಹಾಕಿಬಿಟ್ಟ! ಭಾರತ ಈ ಮ್ಯಾಚನ್ನು ಹೇಗೆ ಗೆದ್ದಿತು ಎನ್ನುವ ವಿಶ್ಲೇಷಣೆಯನ್ನೆಲ್ಲ ನಾನು ಮಾಡಲು ಹೋಗುವುದಿಲ್ಲ. ಅದನ್ನು ನೀವು ನೋಡಿಯೇ ಇರುತ್ತೀರಿ. ಭಾರತ ತಂಡದ ಗುಣವನ್ನು/ಕ್ಯಾರೆಕ್ಟರ್‌ ನೋಡಿ ನನಗೆ ಭಾರತ ಪುಟಿದೇಳಲಿದೆ ಎಂದು ಖಾತ್ರಿಯಾಗಿತ್ತು.

ಹಿಂದಿನ ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್‌ ಆದ ಅನಂತರ ಮೂಲೆಗೆ ತಳ್ಳಲ್ಪಟ್ಟಿತ್ತು. ಮೂಲೆಗೆ ತಳ್ಳಲ್ಪಟ್ಟವನು ಆ ಸಂಕಷ್ಟದಿಂದ ಹೊರಗೆದ್ದು ಬರಬೇಕೆಂದರೆ, ಏನಾದರೂ ಅಸಾಮಾನ್ಯವಾದದ್ದನ್ನೇ ಮಾಡಬೇಕು ಎನ್ನುವುದು ತಂಡಕ್ಕೆ ಅರಿವಾಯಿತು. ಪ್ರತಿಯೊಬ್ಬ ವ್ಯಕ್ತಿಗೂ ಅಸಾಮಾನ್ಯವನ್ನು ಸಾಧಿಸುವ ಸಾಮರ್ಥ್ಯಇರುತ್ತದೆ. ಆ ಸಾಮರ್ಥ್ಯದ ಅರಿವಾಗಬೇಕು ಎಂದರೆ ಪೆಟ್ಟು ತಿನ್ನಲೇಬೇಕಾಗುತ್ತದೆ. ಭಾರತ ಬಹಳ ದೊಡ್ಡ ಪೆಟ್ಟನ್ನೇ ತಿಂದಿತ್ತು! ಆ ಸೋಲಿನ ಅನಂತರ ಅವರು ಒಂದಾಗಿ ನಿಂತರು. ಆಗಲೇ ಅದು ಸೀರೀಸ್‌ ಗೆಲ್ಲಲಿದೆ ಎಂದು ಅನ್ನಿಸಿತ್ತು.

ಈ ಐತಿಹಾಸಿಕ ಗೆಲುವಿನ ಅನಂತರ ಮುಂದಿನ ದಿನಗಳಲ್ಲಿ ಭಾರತವನ್ನು ತಡೆಯಲು ಯಾರಿಗೂ ಸಾಧ್ಯವೇ ಇಲ್ಲ. ಆದರೆ ಒಂದು ವಿಷಯ ಭಾರತಕ್ಕೆ ಅಡ್ಡಿಯಾಗಬಲ್ಲದು. ಅದು ಅತೀ ಆತ್ಮವಿಶ್ವಾಸ ತಾಳಿದರೆ, ಆಟಗಾರರ ಆಯ್ಕೆ ಪ್ರಕ್ರಿಯೆ ಕೆಟ್ಟದಾಗಿದ್ದರೆ ಅಥವಾ ಒಂದು ವೇಳೆ ಭಾರತವೇನಾದರೂ ತನ್ನ ಬೆಂಚ್‌ ಸ್ಟ್ರೆಂತ್‌ ದುರ್ಬಲಗೊಳಿಸಿದರೆ ಅದಕ್ಕೆ ತೊಂದರೆಯಾಗಲಿದೆ. ಏಕೆಂದರೆ ಇವತ್ತು ಇಂದು ಸುಂದರ್‌, ಪಂತ್‌, ಗಿಲ್‌, ಶಾರ್ದೂಲ್‌ನಂಥ ಚಿಕ್ಕ ಹುಡುಗರೇ ಆಸ್ಟ್ರೇಲಿಯಾ ವಿರುದ್ಧ ಗೆದ್ದು ತೋರಿಸಿದ್ದಾರೆ. ಮತ್ತೂಮ್ಮೆ ಹೇಳುತ್ತೇನೆ, ಇದು ನಿಜಕ್ಕೂ ಐತಿಹಾಸಿಕ ಗೆಲುವು. ಇದು ಭಾರತಕ್ಕೆ, ಯುವ ಆಟಗಾರರಿಗೆ ಹಾಗೂ ಆಯ್ಕೆದಾರರಿಗೆ ಬಹಳ ಹೆಮ್ಮೆಯ ಘಳಿಗೆ. ವೆಲ್‌ ಡನ್‌!

 

Advertisement

-ಶೋಯೆಬ್‌ ಅಖ್ತರ್‌ ಪಾಕಿಸ್ಥಾನದ ಮಾಜಿ ಕ್ರಿಕೆಟರ್‌

 

Advertisement

Udayavani is now on Telegram. Click here to join our channel and stay updated with the latest news.

Next