Advertisement

Shivratri; ಧರ್ಮಸ್ಥಳದಲ್ಲಿ ಸಡಗರ: ಇಂದು ಅಹೋರಾತ್ರಿ ಜಾಗರಣೆ

11:59 PM Mar 07, 2024 | Team Udayavani |

ಬೆಳ್ತಂಗಡಿ: ಶಿವರಾತ್ರಿಯು ಸಂಯಮ, ಜಾಗರಣೆ, ಉಪವಾಸ, ವ್ರತ – ನಿಯಮಗಳ ಪಾಲನೆಯೊಂದಿಗೆ ಪಂಚೇಂದ್ರಿಯಗಳ ನಿಯಂತ್ರಣದ ಮೂಲಕ ಎಲ್ಲರಿಗೂ ಮಾನಸಿಕ ಪರಿವರ್ತನೆಯ ಶುಭರಾತ್ರಿಯಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.

Advertisement

ಶಿವರಾತ್ರಿ ಪ್ರಯುಕ್ತ 45 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರತಿವರ್ಷ ಪಾದಯಾತ್ರೆ ಆಯೋಜಿಸುತ್ತಿರುವ ಹನುಮಂತಪ್ಪ ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಗುರುವಾರ ಧರ್ಮಸ್ಥಳದಲ್ಲಿ ಗೌರವಿಸಿ ಪಾದಯಾತ್ರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಮುಂದೆ ನಿರ್ದಿಷ್ಟ ಗುರಿ ಮತ್ತು ಹಿಂದೆ ಆದರ್ಶ ಗುರು ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಪಾದಯಾತ್ರೆಯಲ್ಲಿ ಶ್ರದ್ಧಾ – ಭಕ್ತಿಯಿಂದ ಭಗವಂತನ ನಾಮ ಸ್ಮರಣೆಯೊಂದಿಗೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ತ್ಯಾಗ ಮನೋಭಾವ ಮತ್ತು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಯುವಜನರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಆಶಾ ದಾಯಕ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಮ್ಮಾನ
ಚಲನಚಿತ್ರ ನಿರ್ದೇಶಕ ಶಶಿಕುಮಾರ್‌, ನಾಗರಾಜ ರೆಡ್ಡಿ, ಕಮಲಾ ಮೋಹನ ಗೌಡ, ಚಂದ್ರಪ್ಪ, ಹನುಂತರಾಯಪ್ಪ, ನರಸಿಂಹಪ್ಪ ಮತ್ತು ಮರಿಯಪ್ಪ ಅವರನ್ನು ಸಮ್ಮಾನಿಸಲಾಯಿತು. ಪಾದಯಾತ್ರಿಗಳ ಕ್ಷೇತ್ರದರ್ಶನ ಸುಗಮವಾಗಲು ಸಹಕರಿಸಿದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದು, ಗುರುವಾರವೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. 3 ದಿನ ಸರಕಾರಿ ರಜೆಯಾದ್ದರಿಂದ ನಿರೀಕ್ಷೆಗೂ ಮೀರಿ ಭಕ್ತರು ಸೇರಿದ್ದಾರೆ.

Advertisement

ಇಂದು ಅಹೋರಾತ್ರಿ ಜಾಗರಣೆ
ಗುರುವಾರವೇ ನಾಡಿನೆಲ್ಲಡೆಯಿಂದ ಬಂದ 15 ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಕ್ಷೇತ್ರದಲ್ಲಿ ಸೇರಿದ್ದಾರೆ. 40 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರಿಗಳು ಹಾಗೂ 2 ಲಕ್ಷಕ್ಕೂ ಮಿಕ್ಕಿ ಭಕ್ತರ ಮಾ. 7ರಂದು ಸೇರುವ ನಿರೀಕ್ಷೆಯಿದೆ. ಸಂಜೆ 6ಕ್ಕೆ ದೇವಸ್ಥಾನದ ಎದುರು ಪ್ರವಚನ ಮಂಟಪದಲ್ಲಿ ಡಾ| ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸುವರು. ಉಪವಾಸ ಮತ್ತು ವ್ರತ, ನಿಯಮಗಳೊಂದಿಗೆ ಇಡೀ ರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ದೇವರ ನಾಮಸ್ಮರಣೆ ನಡೆಯುತ್ತದೆ. ಶನಿವಾರ ಮುಂಜಾನೆ ರಥೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next