ಮಣಿಪಾಲ: ಗೋ ಮಾತೆಯನ್ನು ವಿಶ್ವಮಾತೆಯ ಸ್ಥಾನದಲ್ಲಿಟ್ಟು ಭಾರತೀಯರು ಪೂಜಿಸುತ್ತಾ ಬಂದಿದ್ದಾರೆ. ದೈವಿಕ ಶಕ್ತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಗೋಮಾತೆಯ ಒಡನಾಟ, ಬಾಂಧವ್ಯ ದಲ್ಲಿ ಮಕ್ಕಳನ್ನು ಬೆಳೆಸಿದಾಗ ಮತಾಂತರವಾಗುವುದನ್ನು ತಪ್ಪಿಸುವುದಕ್ಕೆ ಸಾಧ್ಯ ಎಂದು ಬೆಂಗಳೂರಿನ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಗುರುವಾರ ನಡೆದ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ಸನಾತನ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡ ಗೋಮಾತೆಯನ್ನು ಪೂಜಿಸಿ ಬೆಳೆಯುವ ಹೆಣ್ಣು ಮಕ್ಕಳು ಎಂದಿಗೂ ಮತಾಂತರಕ್ಕೆ ಮನ ಮಾಡುವುದಿಲ್ಲ. ದೇಗುಲಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಹಿರಿಯರ ಜತೆ ಮಕ್ಕಳು, ಅಕ್ಕ, ತಂಗಿಯರು ಸೇರಿದಂತೆ ಇಡೀ ಕುಟುಂಬವೇ ಬರುವಂತಾಗಬೇಕು. ಆಗ ದೇಗುಲದ ಪಾವಿತ್ರ್ಯ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಯಲ್ಪಡುತ್ತದೆ ಎಂದರು.
ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಾ, ಇಲ್ಲಿನ ದೇಗುಲಗಳಿಗೆ ಬರುತ್ತಾರೆ. ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅವರ ವಸ್ತ್ರ ಸಂಹಿತೆಯನ್ನು ಬಳಸುತ್ತಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಪರ್ಯಾಸ ಎಂದರು.
ಶಿವಾನಿ ಡಯಾಗ್ನೊಸ್ಟಿಕ್ ಸೆಂಟರ್‌ನ ಮಾಲಕ ಡಾ| ಶಿವಾನಂದ ನಾಯಕ್ ಮಾತನಾಡಿ, ಅತಿರುದ್ರ ಮಹಾಯಾಗದಿಂದ ಲೋಕಕ್ಕೆ ಕಲ್ಯಾಣ ವಾಗಲಿದೆ. ತನ್ಮೂಲಕ ಸಮಸ್ತ ಜನರ ಆರೋಗ್ಯ, ದೈಹಿಕ ಶಕ್ತಿ ವೃದ್ಧಿಯಾಗಿ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ದೊರಕುತ್ತದೆ ಎಂದರು.
ಕೃಷ್ಣಪ್ಪ ಸಾಮಂತ ಸ.ಹಿ.ಪ್ರಾ. ಶಾಲೆಯ ಸಂಸ್ಥಾಪಕ ಶ್ರೀಧರ ಕೆ. ಸಾಮಂತ್ ಉದ್ಘಾಟಿಸಿ ಶುಭ ಹಾರೈಸಿದರು. ಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸ್ವದೇಶಿ ಔಷಧ ಭಂಡಾರದ ಭರತ್ ಪ್ರಭು, ಆರೆಸ್ಸೆಸ್ ಜಿಲ್ಲಾ ಸಂಘಚಾಲಕ್ ನಾರಾಯಣ ಶೆಣೈ, ರಾಧಾಕೃಷ್ಣ ಸಾಮಂತ್, ಕೂಟ ಮಹಾ ಜಗತ್ತಿನ ಅಧ್ಯಕ್ಷ ಡಾ| ಎ. ಗಣೇಶ್, ದೇಗುಲದ ಉಪಾಧ್ಯಕ್ಷ ಎಸ್. ಅಶೋಕ್ ಪ್ರಭು, ರತ್ನಾಕರ ಆಚಾರ್ಯ, ಜಿ. ಕೃಷ್ಣರಾಯ ಪಾಟೀಲ್ , ಮೊಕ್ತೇಸರರಾದ ದಿನೇಶ್ ಪ್ರಭು, ಶುಭಕರ ಸಾಮಂತ್, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಉಗ್ರಾಣ ಸಮಿತಿ ಸಂಚಾಲಕ ಪ್ರಕಾಶ್ ಪ್ರಭು, ಡಾ| ಆಶಾ ಪಾಟೀಲ್ ಉಪಸ್ಥಿತರಿದ್ದರು.
ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ನಿರೂಪಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು.
ಹೆತ್ತವರಿಂದಲೇ ಸಂಸ್ಕೃತಿಗೆ ತಿಲಾಂಜಲಿ!
ಪ್ರಸ್ತುತ ಪೋಷಕರು ತಮ್ಮ ಮಕ್ಕಳಿಗೆ ಜೀನ್ಸ್ ಪ್ಯಾಂಟ್-ಶರ್ಟ್ ತೊಡಿಸಿ ಅಂದ ನೋಡುವುದು, ಹುಟ್ಟುಹಬ್ಬದಂದು ಕೇಕ್ ಕತ್ತರಿಸುವುದು, ಹಿರಿಯರು ಎದುರಾದರೆ ಹಸ್ತಲಾಘವ ಮಾಡುವಂತೆ, ಹಾಯ್ ಹೇಳಲು ತಿಳಿಸುವುದರಿಂದ ನಮ್ಮ ಸಂಸ್ಕೃತಿಗೆ ನಾವೇ ತಿಲಾಂಜಲಿ ಇಡಲು ಮುಂದಾಗುತ್ತಿದ್ದೇವೆ. ಮಕ್ಕಳಿಗೆ ಪ್ರತಿನಿತ್ಯ ಮನೆಯಲ್ಲಿ ಮಾತೆಯರು ಅಪಾರ ಅರ್ಥ ವೈಶಾಲ್ಯವುಳ್ಳ ಸಂಸ್ಕಾರ, ಸಂಸ್ಕೃತಿಯನ್ನು ಪಾಲಿಸುವಂತೆ ಪ್ರೇರೇಪಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಹಾರಿಕಾ ಮಂಜುನಾಥ್ ತಿಳಿಸಿದರು.