ತಿ.ನರಸೀಪುರ: ಸರಳತೆ ಜೀವನವನ್ನು ನಡೆಸುತ್ತಾ ಸಾಮಾಜಿಕ ಸಮಸ್ಯೆಗಳನ್ನು ಅರಿತಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸುತ್ತೂರು ಮಠದಲ್ಲಿ ಅಕ್ಷರ ದಾಸೋಹಕ್ಕೆ ಮುನ್ನುಡಿ ಬರೆದರು ಎಂದು ವಾಟಾಳು ಮಠದ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ನಡೆದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 102ನೇ ವರ್ಷದ ಜಯಂತಿ ಉದ್ಘಾಟಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ತಾವೊಬ್ಬ ಧಾರ್ಮಿಕ ಗುರು ಎಂಬ ಭಾವನೆ ಹೊಂದಿರದ ಶಿವರಾತ್ರಿ ರಾಜೇಂದ್ರ ಶ್ರೀಗಳು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಸಾಮಾನ್ಯರಂತೆ ನಡೆದುಕೊಳ್ಳುತ್ತಿದ್ದರು. ದೀನ ದಲಿತರ ಕಷ್ಟಕರ ಬದುಕನ್ನು ಹತ್ತಿರದಿಂದ ಕಂಡಿದ್ದರಿಂದ ಸುತ್ತೂರು ಮಠದಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ತೆರೆದರು ಎಂದರು.
ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಂತಹ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸರಳತೆ ಬದುಕು ಜನರಿಗೆ ಹೆಚ್ಚು ಇಷ್ಟವಾಗಿದ್ದರಿಂದ ಹೆಚ್ಚಿನ ಭಕ್ತ ಸಮೂಹವನ್ನು ಇಂದಿಗೂ ಹೊಂದಿದ್ದಾರೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಿಗೆ ಭದ್ರಬುನಾದಿಯನ್ನು ಹಾಕಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಕೊಟ್ಟು ಹಾಗೂ ಸಾವಿರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆಂದರು.
ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಯುದ್ಧದಲ್ಲಿ ಸರ್ವಶ್ವವನ್ನೂ ಕಳೆದುಕೊಂಡ ರಾಜನಿಗೆ ತಪಸ್ಸಿನಲ್ಲಿ ನಿರತರಾಗಿದ್ದ ಮಹರ್ಷಿಯೊಬ್ಬರು ವೃಕ್ಷವೊಂದರಿಂದ ಮತ್ತೆ ಎಲ್ಲವನ್ನೂ ಪಡೆಯಲು ಸೂಚನೆ ನೀಡಿದಂತೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಬೃಹದಾಕಾರವಾಗಿ ವಿಶ್ವದೆಲ್ಲೆಡೆ ಬೆಳೆಯಲು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಅವಿರತವಾದ ತಪಸ್ಸಿನ ಶ್ರಮವಿದೆ.
ಸುತ್ತೂರಿನಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಗಳು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಪ್ರಥಮ ಬಾರಿಗೆ ಪ್ರವೇಶಾತಿ ನೀಡುವ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ಕಲ್ಪಿಸಿದರು ಎಂದು ತಿಳಿಸಿದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ಆರ್.ಮಂಜುನಾಥ್, ಸಂಯೋಜನಾಧಿಕಾರಿ ಜಿ.ಎನ್.ತ್ರಿಪುರಾಂತಕ ಶ್ರೀಗಳ ಜೀವನ ಕುರಿತು ವಿಸ್ತಾರವಾಗಿ ತಿಳಿಸಿಕೊಟ್ಟರು.
ಮೇದನಿ ಮಠ ಶಿವಲಿಂಗಸ್ವಾಮಿ ಸ್ವಾಮೀಜಿ, ಎಂ.ಎಲ್.ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಮಾಡ್ರಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತಿರುಮಕೂಡಲು ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಹೊಸೂರುಹುಂಡಿ ಮಠದ ರಾಜಶೇಖರ ಸ್ವಾಮೀಜಿ, ಬೆನಕನಹಳ್ಳಿ ಮಠದ ಮಹದೇವಸ್ವಾಮಿ ಸ್ವಾಮೀಜಿ, ಪ್ರಗತಿಪರ ರೈತ ಮಾಡ್ರಳ್ಳಿ ಶಂಕರ್‌ಗುರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಶ್ರೀಮಹದೇಶ್ವರ ಭವನ ಮಾಲಿಕ ಹೊಟೇಲ್ ರಾಜಣ್ಣ(ಲಿಂಗರಾಜು) ಮತ್ತಿತರರಿದ್ದರು.