Advertisement

ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಆಚರಣೆ ಶಿವರಾತ್ರಿ

07:45 AM Mar 05, 2019 | |

ರಾಮನಗರ: ಮಹಾಶಿವರಾತ್ರಿ ಎನ್ನುವುದು ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಆಚರಣೆ ಎಂದು ತಾಲೂಕಿನ ಅವ್ವೆರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯಹೇಳಿದರು.

Advertisement

ತಾಲೂಕಿನ ಅವ್ವೆರಹಳ್ಳಿಯ ಎಸ್‌.ಆರ್‌.ಎಸ್‌. ಕ್ಷೇತ್ರದ ದಾಸೋಹ ಮಠದ ಆವರಣದಲ್ಲಿರುವ ಶ್ರೀ ರೇಣುಕಾಚಾರ್ಯ ಪ್ರತಿಮೆ ಎದರು ಶಾಂತಲಾ ಚಾರಿಟಬಲ್‌ ಟ್ರಸ್ಟ್‌ ಶಿವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಿವರಾತ್ರಿ ವೈಭವ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವನಿಗೂ ರಾತ್ರಿಗೂ ನಿಕಟ ಸಂಬಂಧವಿದೆ. ಒಂದು ರಾತ್ರಿಯು ಸಾಮಾನ್ಯವಾಗಿ ನಾವು ನೋಡುವ ರಾತ್ರಿ. ಆದರೆ ಮಹಾಶಿವರಾತ್ರಿ ಎನ್ನುವುದು ಅಜ್ಞಾನ, ಅಂಧಕಾರ, ಪಾಪವನ್ನು ತೊಡೆಯುವ ಪವಿತ್ರವಾದ ರಾತ್ರಿ. ಅಜ್ಞಾನವೇ ರಾತ್ರಿ ಎಂಬ ಸಂದೇಶವನ್ನು ಈ ಆಚರಣೆ ಸಾರುತ್ತದೆ ಎಂದರು.        
      
ಮಠದ ಕಿರಿಯ ಶ್ರೀಗಳಾದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭಾರತ ಹಲವು ಹಬ್ಬ ಆಚರಣೆಗಳ ತವರೂರು. ವಿವಿಧ ದೇವರುಗಳನ್ನು ಪೂಜಿಸುವ ಇಲ್ಲಿ ಶ್ರೀಮಂತವಾದ ಪುರಾಣಕತೆಗಳಿವೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಅದರದ್ದೇ ಆದ ಇತಿಹಾಸ, ನಂಬಿಕೆ ಮತ್ತು ಮಹತ್ವವಿದೆ.

ದೇವರ ಜತೆಗೆ ಪ್ರಕೃತಿಯನ್ನೂ ಆರಾಧಿಸುವ ನಾವು ಜಗತ್ತಿನಲ್ಲಾಗುವ ಬದಲಾವಣೆಗೆ ನಮ್ಮದೇ ಆದ ಕಾರಣಗಳನ್ನೂ ಕೊಡುತ್ತೇವೆ ಎಂದು ತಿಳಿಸಿದರು. ಶಿವರಾತ್ರಿಗೂ ವಿಜ್ಞಾನಕ್ಕೂ ಸಂಬಂಧವಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭಗೊಳ್ಳುತ್ತದೆ.

ಅಂದರೆ ಈ ದಿನದಂದು ಚಳಿ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿದೆ. ಪ್ರಕೃತಿಯಲ್ಲಿ ವ್ಯತ್ಯಯಾಗುವ ಸಮಯದಲ್ಲಿ ನಮ್ಮ ದೇಹದಲ್ಲೂ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ ಬರುವುದು.

Advertisement

ಹಾಗಾಗಿ ಇಂಥ ಸಂದರ್ಭದಲ್ಲಿ ಬರುವ ಶಿವರಾತ್ರಿಯಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಶಿವರಾತ್ರಿ ಆಚರಣೆಯ ಹಿಂದಿನ ವೈಜ್ಞಾನಿಕ ಮಹತ್ವವನ್ನು ತಿಳಿಸಿದರು. ಇದೇ ವೇಳೆ ಇಷ್ಟಲಿಂಗ ತಯಾರಕರಾದ ಮಹದೇವಸ್ವಾಮಿ, ಶಿವಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ನೃತ್ಯ ಕಲಾವಿದೆ ಚಿತ್ರರಾವ್‌ ಮತ್ತು ತಂಡ ಹಾಗೂ ಶಾಂತಲಾ ಕಲಾ ಕೇಂದ್ರದ ಮಕ್ಕಳು ನೃತ್ಯ ಮತ್ತು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಕೆ.ಎಸ್‌. ಧನಂಜಯ, ಶಿಕ್ಷಕರಾದ ನೇ. ರ. ಪ್ರಭಾಕರ್‌, ಎಂ.ಎಸ್‌. ಚನ್ನವೀರಪ್ಪ, ಶಾಂತಲಾ ಚಾರಿಟಬಲ್‌ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್‌, ಗಾಯಕ ಮಲ್ಲಪ್ಪ, ಬಿ.ಟಿ. ರಾಜೇಂದ್ರ, ನೃತ್ಯ ನಿರ್ದೇಶಕ ರೇಣುಕಾಪ್ರಸಾದ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next