Advertisement
ಉಡುಪಿಯ ಬಡಾನಿಡಿಯೂರಿನಲ್ಲಿ ಕ್ಷತ್ರಿಯ ಶಿವಾಜಿ ಮರಾಠ ವಂಶಸ್ಥರು ಆಚರಿಸುವ ವಿಜಯದಶಮಿ ತುಂಬಾ ವಿಶೇಷ. ಬಿಲ್ಲಿಗೆ ಹೆದೆಯೇರಿಸಿ ಬಾಳೆ ಬಾಣ ಪ್ರಯೋಗ ಮಾಡುವ ಮೂಲಕ ಕ್ಷತ್ರಿಯತ್ವ ಮೆರೆಯುವ ಅಪರೂಪದ ಪದ್ಧತಿ ಕಳೆದ 300 ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ.
ಪೌಂಜಿಗುಡ್ಡೆ ಅಥವಾ ಫೌಝಗುಡ್ಡೆ ಎಂದು ಕರೆಯಲ್ಪಡುವ ಈ ಸ್ಥಳ ಹಿಂದೆ ಛತ್ರಪತಿ ಶಿವಾಜಿ ವಂಶಸ್ಥರ ಸೇನೆ ಬೀಡುಬಿಟ್ಟ ಸ್ಥಳ ಎಂದು ಉಲ್ಲೇಖೀವಿದೆ. ಇದಕ್ಕೆ ಪುರಾವೆ ಎಂಬಂತೆ ಪ್ರತಿ ಮನೆತನದ ದೇವರ ಮನೆಯಲ್ಲಿ ಅಂದಿನ ಕಾಲದ ಖಡ್ಗ, ಬಿಲ್ಲು, ಬಾಣಗಳು ಇಂದಿಗೂ ಪೂಜಿಸಲ್ಪಡುತ್ತವೆ.
Related Articles
Advertisement
ವೈಷಮ್ಯ ಮರೆಯಲು ಇದೊಂದು ಅವಕಾಶಸುಮಾರು 300ಕ್ಕೂ ಅಧಿಕ ವರ್ಷಗಳಿಂದ ಆಚರಣೆ, ಇದೀಗ ಇಲ್ಲಿ 45 ಕುಟುಂಬಗಳ ಕ್ಷತ್ರಿಯ ಮರಾಠರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮುಖ್ಯವಾಗಿ ಯಾವುದೇ ಕುಟುಂಬ ವೈಷಮ್ಯ ಇದ್ದರೂ ಈ ವೇಳೆ ಎಲ್ಲವನ್ನು ಮರೆತು ಬನ್ನಿಯನ್ನು ವಿನಿಮಯ ಮಾಡಿಕೊಂಡು ತಮ್ಮ ವೈಷಮ್ಯವನ್ನು ಮರೆಯುದಕ್ಕೆ ಇದೊಂದು ಒಳ್ಳೆಯ ಅವಕಾಶ. ಇದಕ್ಕೆ ಧಾರ್ಮಿಕ ಹಿನ್ನೆಲೆ ಇರುವುದರಿಂದ ಎಲ್ಲರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
– ಬಡಾನಿಡಿಯೂರು ಕೇಶವ ರಾವ್ ಬಾಣ ಪ್ರಯೋಗದ ಕ್ರಮ ಹೀಗಿದೆ..
- ಮನೆಯಲ್ಲಿ ಆಯುಧ ಪೂಜೆ ಆದ ಬಳಿಕ ಎಲ್ಲರೂ ಬನ್ನಿ ಮಂಟಪದ ಬಳಿ ಬರುತ್ತಾರೆ. ಬನ್ನಿ ಮಂಟಪದಿಂದ ಸುಮಾರು 100 ಮೀಟರ್ ದೂರದಲ್ಲಿ ಒಂದು ಬಾಳೆ ಗಿಡವನ್ನು ನೆಡಲಾಗಿರುತ್ತದೆ. ಇದಕ್ಕೆ ಬಿಲ್ಲಿಗೆ ಬಾಣ ಹೂಡಿ ಹೊಡೆಯಬೇಕು. ಸಮಾಜದ ಪಟೇಲರ ಮನೆಯಿಂದ ಬಿಲ್ಲು ತರಲಾಗುತ್ತದೆ. ಉಳಿದ ಸುಮಾರು 25 ಮನೆಯವರು ಒಬ್ಬೊಬ್ಬರು ಒಂಬತ್ತು ಬಾಣಗಳನ್ನು ತರುತ್ತಾರೆ.
- ಬನ್ನಿ ಮಂಟಪದಲ್ಲಿ ನಿಂತು ಒಬ್ಬೊಬ್ಬರು ಒಂಬತ್ತು ಬಾಣ ಬಿಡಲು ಅವಕಾಶವಿರುತ್ತದೆ. ಒಂದು ವೇಳೆ ನಡುವೆ ಯಾವುದಾದರೂ ಬಾಣ ಬಾಳೆ ಗಿಡಕ್ಕೆ ನೆಟ್ಟರೆ ಅದನ್ನು ಕಡಿಯಲಾಗುತ್ತದೆ. ಯಾರು ಬಾಣ ಬಿಡುತ್ತಾರೋ ಅವರಿಗೆ ಭಾವನಾಗುವ ಸಂಬಂಧಿಕ ಬಾಳೆ ಗಿಡವನ್ನು ಕಡಿದು ಶ್ರೀರಾಮ್ ಎಂದು ಹೇಳಿ ಅಭಿನಂದನೆ ಸಲ್ಲಿಸುತ್ತಾರೆ.
- ಇಲ್ಲಿ ಬಾಣ ಬಿಡಲು ವಿವಾಹಿತರಿಗೆ ಮಾತ್ರ ಅವಕಾಶ. ಮೊದಲು ಸಮಾಜದ ಮೂವರು ಮೊಕ್ತೇಸರರು ಬಾಣ ಬಿಟ್ಟರೆ ಬಳಿಕ ಹಿರಿಯತ್ವದ ಆಧಾರದಲ್ಲಿ ಸರದಿ ನಿರ್ಣಯವಾಗುತ್ತದೆ. ಎಲ್ಲರ ಸರದಿ ಮುಗಿದ ಮೇಲೆ ಬನ್ನಿ ಪತ್ರೆಯನ್ನು ಪ್ರತಿಯೊಬ್ಬರೂ ವಿನಿಮಯ ಮಾಡಿಕೊಂಡು ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಆ ಬಳಿಕ ಅಂಬಾ ಭವಾನಿ ಹಾಗೂ ಶಿವಾಜಿ ಮಹಾರಾಜರ ಹೆಸರನ್ನು ಉದ್ಘೋಷಿಸುತ್ತಾ ವಿಜಯೋತ್ಸವ ಆಚರಿಸಲಾಗುತ್ತದೆ. ಅಲ್ಲಿಂದ ಅವರವರ ದೇವರ ಮನೆಗೆ ತೆರಳಿ, ಸುಮಂಗಲೆಯರು ಓಕುಳಿಯನ್ನು ಮಾಡಿ ಪುರುಷರ ಕಾಲು ತೊಳೆದು ಆರತಿ ಬೆಳಗಿ ದೇವರಿಗೆ ನಮಸ್ಕರಿಸುತ್ತಾರೆ.