Advertisement

ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

08:30 PM Jan 24, 2022 | Team Udayavani |

ಶಿರಸಿ: ಉಸ್ತುವಾರಿ ಸಚಿವ ಸ್ಥಾನದ ಮರು ವಿಂಗಡನೆಯಲ್ಲಿ ಮುಖ್ಯಮಂತ್ರಿಗಳು ತವರು ಜಿಲ್ಲೆ ಹಾವೇರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಿಸಿದ್ದು, ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ‌ ಮಾಡುವದಾಗಿ ಕಾರ್ಮಿಕ ಸಚಿವ ‌ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಆ ಜಿಲ್ಲೆಯ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯಗಳ ಅನುಷ್ಟಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ‌ ಮಾಡುತ್ತೇನೆ ಎಂದೂ ಹೇಳಿದ್ದಾರೆ.

ಈವರೆಗೆ ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಜಿಲ್ಲೆಯ ಎಲ್ಲಾ ಶಾಸಕರ, ಸಂಸದರ ಹಾಗೂ ಅಧಿಕಾರ ಸಹಕಾರದೊಂದಿಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲೆಯ ಸಾರ್ವಜನಿಕ ಬೆಂಬಲದೊಂದಿಗೆ ಕೋವಿಡ್ ಮಹಾಮಾರಿಯನ್ನು ಅತ್ಯಂತ ಯಶಸ್ವಿಯಾಗಿ ಹಿಮ್ಮೆಟ್ಟಿ ಕ್ಲಿಷ್ಟಕರ ಸಂದರ್ಭದಲ್ಲಿ ಎಲ್ಲರ ಸಹಕಾರದೊಂದಿಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ವೈದ್ಯರನ್ನು, ವೈದ್ಯಕೀಯ ಪರಿಕರಗಳನ್ನು ಸಮರ್ಥ ಸಮಯದಲ್ಲಿ ಒದಗಿಸುವುದರ ಜೊತೆಯಲ್ಲಿ ಆಕ್ಸಿಜನ್ ತಯಾರಿಕಾ ಘಟಕವನ್ನು ಸ್ಥಾಪಿಸುವುದರ ಮೂಲಕವಾಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದೇನೆ ಎಂದೂ ನೆನಪಿಸಿದ್ದಾರೆ.

ಇದನ್ನೂ ಓದಿ : ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು

ಪ್ರಮಾಣ ವಚನ ಪಡೆದ ಮರುದಿನವೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರವಾಹದೊಡೆತಕ್ಕೆ ತತ್ತರಿಸಿಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ ಹಾನಿ ಪ್ರದೇಶಗಳ ವೀಕ್ಷಣೆಗೆ ಕರೆತಂದು ಪರಿಹಾರ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದೇನೆ. ಉತ್ತರಕನ್ನಡ ಜಿಲ್ಲೆಯ ಭವಿಷ್ಯದ ಹಿತ ದೃಷ್ಟಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಮಾನ ನಿಲ್ದಾಣ, ವಾಣಿಜ್ಯ ಬಂದರು ಹಾಗೂ ಹಲವಾರು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಉಂಟಾಗಿದ್ದ ಅಡೆತಡೆಗಳನ್ನು ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಯಾ, ವಾಚಾ, ಮನಸಾ ಪ್ರಾಮಾಣಿಕವಾಗಿ ಶ್ರಮಿಸಿದ ಆತ್ಮ ತೃಪ್ತಿ ನನಗಿದೆ ಈ ವೇಳೆ ಸಹಕರಿಸಿದ ಸರ್ವರಿಗೂ ಹೃದಯಾಂತರಾಳದ ನಿಷ್ಕಲ್ಮಶ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ ಎಂದೂ ಹೇಳಿದ್ದಾರೆ.

Advertisement

ಹಾವೇರಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಂಡರು ಸಹ ನನಗೆ ಕರ್ಮ ಭೂಮಿ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನೂತನ ಉಸ್ತುವಾರಿ ಸಚಿವರ ಜೊತೆಗೂಡಿ ಅಭಿವೃದ್ಧಿ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಹಿಂದಿನಂತೆ ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದೂ ಭರವಸೆ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಪಕ್ಷದ ಹಿರಿಯ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಉತ್ತರಕನ್ನಡ ಜಿಲ್ಲೆ ಸಮಸ್ತ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಎಲ್ಲರೂ ಜೊತೆಗೂಡಿ ಉತ್ತರಕನ್ನಡ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಶುಭ ಹಾರೈಸುತ್ತೆನೆ ಎಂದೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next