ಬೆಂಗಳೂರು: ಕಳೆದ ಕೆಲ ದಿನಗಳಿಂದ ವಯೋಸಹಜದಿಂದ ಉಂಟಾಗಿರುವ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿರುವ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಮಂಗಳವಾರ (ನ.28 ರಂದು) ನಟ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ನೆಲಮಂಗಲ ಬಳಿಯಿರುವ ಸೋಲದೇವನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಲೀಲಾವತಿ ಅವರ ಮಗ ವಿನೋದ್ ಅವರ ಬಳಿ ತಾಯಿಯ ಆರೋಗ್ಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ವಿನೋದ್ ರಾಜ್ – ಶಿವರಾಜ್ ಕುಮಾರ್ ತಪ್ಪಿಕೊಂಡು ಭಾವುಕರಾದರು. ಶಿವರಾಜ್ ಕುಮಾರ್ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದರು.
87 ವರ್ಷದ ಲೀಲಾವತಿ ಅವರು ಕನ್ನಡ ಸಿನಿಮಾರಂಗದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಈ ಕಾರಣದಿಂದ ಅವರು ಹಾಸಿಗೆಯಲ್ಲೇ ಮಲಗಿಕೊಂಡು ಇದ್ದಾರೆ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖವಾಗಲೆಂದು ಆಶಿಸಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವರಾಜ್ ಕುಮಾರ್ ಅವರು ಕೂಡ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇತ್ತೀಚೆಗೆ ಲೀಲಾವತಿ ಅವರ ಮನೆಗೆ ಅರ್ಜುನ್ ಸರ್ಜಾ ಹಾಗೂ ನಟ ದರ್ಶನ್ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಕನ್ನಡ ಸಿನಿಮಾರಂಗದ ಕಲಾವಿದರು ತಂತ್ರಜ್ಞರು, ರಾಜಕಾರಣಿಗಳು ಸೇರಿದಂತೆ ಹಲವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ.