ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಿಂದ ಅತಿರುದ್ರ ಮಹಾಯಾಗ ಆರಂಭಗೊಂಡಿದ್ದು, ಈ ಪ್ರಯುಕ್ತ ಮಾ. 5ರ ತನಕ ಪ್ರತಿದಿನ ಸಂಜೆ 5ರಿಂದ ಧಾರ್ಮಿಕ ಪ್ರವಚನ ಹಾಗೂ ಸಂಜೆ 7ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಫೆ. 24ರಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ… ಕಶೆಕೋಡಿ ಅವರಿಂದ ಧಾರ್ಮಿಕ ಉಪನ್ಯಾಸ, ಆರ್ಯಭಟ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ “ಶಿವ ಗಾನಾಮೃತ’, ಫೆ. 25ರಂದು ಪತ್ರಕರ್ತ ಅಜಿತ್ ಹನುಮಕ್ಕನವರ ಅವರಿಂದ ಧಾರ್ಮಿಕ ಉಪನ್ಯಾಸ, ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧಾ ಭಟ್, ಸುನೀತಾ ಭಟ್ ಕೂಡುವಿಕೆಯಲ್ಲಿ
ಭಕ್ತಿ-ಗಾನ ಸಿಂಚನ, ರಾಷ್ಟ್ರದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತಪಡಿಸುವ ಆದರ್ಶ್ ಗೋಖಲೆಯವರ ನಿರೂಪಣೆಯಲ್ಲಿ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿ| ಶಾರದಾಮಣಿ ಶೇಖರ್ ಮತ್ತು ವಿ| ಶ್ರೀಲತಾ ನಾಗರಾಜ್ ಅವರಿಂದ “ಪುಣ್ಯ ಭೂಮಿ ಭಾರತ’ ನಡೆಯಲಿದೆ.
ಫೆ. 26ರಂದು ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರಿಂದ ಧಾರ್ಮಿಕ ಉಪನ್ಯಾಸ, ಬೆಂಗಳೂರಿನ ಕಪರ್ದಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಅವರಿಂದ “ಭಾರತೀಯ ಶಾಸ್ತ್ರೀಯ ನೃತ್ಯ-ಮಹಾರುದ್ರ’, ನೃತ್ಯ ನಿಕೇತನ ಕೊಡವೂರು ತಂಡದ ವಿ| ಮಾನಸಿ ಸುಧೀರ್, ವಿ| ಅನಘಶ್ರೀ ಅವರಿಂದ ನೃತ್ಯ ರೂಪಕ-ನಾರಸಿಂಹ (ಒಳಿತಿನ ವಿಜಯದ ಕಥನ), ಫೆ. 27ರಂದು ಮಂಗಳೂರು ಅಖಿಲ ಭಾರತೀಯ ಜ್ಞಾನ ಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಧಾರ್ಮಿಕ ಉಪನ್ಯಾಸ, ವಿ| ಪವನಾ ಬಿ. ಆಚಾರ್ಯ ಮತ್ತು ವಿದ್ಯಾರ್ಥಿಗಳಿಂದ ಏಕಾದಶ ವೀಣಾ ವಾದನ, ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ “ಭೀಷ್ಮ ವಿಜಯ’, ಫೆ. 28ರಂದು ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಅವರಿಂದ ಪ್ರಧಾನ ಭಾಷಣ, ವಿ| ರೂಪಾ ಕಿರಣ್ ಹಾಂಕಾಂಗ್ ಅವರಿಂದ ಭರತನಾಟ್ಯ, ಮಂಗಳೂರು ಉರ್ವ ಚಿಲಿಂಬಿ ಸಾಯಿ ಶಕ್ತಿ ಕಲಾ ತಂಡದಿಂದ ತುಳು ಪೌರಾಣಿಕ ನಾಟಕ “ಬೊಳ್ಳಿ ಮಲೆತ ಶಿವ ಶಕ್ತಿಲು’ ಜರಗಲಿದೆ.
ಮಾ. 1ರಂದು ಪ್ರಸಿದ್ಧ ಪ್ರೇರಣಾದಾಯಿ, ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಶಿರಸಿಯ ಬಿ.ಕೆ. ವೀಣಾ ಅವರಿಂದ “ಶಿವಧ್ಯಾನದಿಂದ ಧನ್ಯತೆಯ ಜೀವನ’ ಪ್ರವಚನ, ವಿಶ್ವವಿಖ್ಯಾತ ಜಾದೂಗಾರ ಪ್ರೊ| ಶಂಕರ್ ಹಾಗೂ ಜೂ| ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ತಂಡದಿಂದ ಜಾಗೃತಿಗಾಗಿ ಜಾದೂ-ಆಧ್ಯಾತ್ಮಿಕ ಜಾದೂ ಪ್ರದರ್ಶನ, ಗ್ಲೋ ಆರ್ಟ್ ಖ್ಯಾತಿಯ ಪ್ರಸಿದ್ಧ ಕಲಾವಿದ ಬೆಂಗಳೂರಿನ ವಿನಯ್ ಹೆಗಡೆ ಅವರಿಂದ ಬ್ರಶ್ ಕ್ಯಾನ್ವಸ್ ಇಲ್ಲದೆ ಗಾಳಿಯಲ್ಲಿ ಬಿಡಿಸುವ ಶಿವ ಪರಮಾತ್ಮನ ವರ್ಣರಂಜಿತ ಆ್ಯನಿಮೇಟ್ ಚಿತ್ತಾರ ವಿಸ್ಮಯ-ಗಾಳಿಯಲ್ಲಿ ಚಿತ್ತಾರ, ಮಾ. 2ರಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇಗುಲದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರಿಂದ ಧಾರ್ಮಿಕ ಉಪನ್ಯಾಸ, ಸಂಗೀತ ಶಾರದೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗಾಯನ ನಡೆಯಲಿದೆ.
ಮಾ. 3ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಂದ ದಿಕ್ಸೂಚಿ ಭಾಷಣ, ಪ್ರಸಿದ್ಧ ಶಾಸ್ತ್ರೀಯ ಗಾಯಕ ಜಯತೀರ್ಥ ಮೇವುಂಡಿ ಅವರಿಂದ ಶಾಸ್ತ್ರೀಯ ಸಂಗೀತ, ಮಾ. 4ರಂದು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಮಜ್ಜಗದ್ಗುರು ವಿಧುಶೇಖರಭಾರತೀ ಸ್ವಾಮೀಯವರಿಂದ ಧಾರ್ಮಿಕ ಸಭೆ ಉದ್ಘಾಟನೆ ಮತ್ತು ಆಶೀರ್ವಚನ, ಟಿವಿ ರಿಯಾಲಿಟಿ ಶೋ “ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ, ಮಾ. 5ರಂದು ಅಪರಾಹ್ನ 2ರಿಂದ “ಕಾಶ್ಮೀರ ವಿಜಯ’ ತಾಳಮದ್ದಳೆ ಜಗರಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.