ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 22ರ ಬುಧವಾರ ಋತ್ವಿಜರಿಂದ ಪೂಜೆಯೊಂದಿಗೆ ಅತಿರುದ್ರ ಮಹಾಯಾಗ ಶುಭಾರಂಭಗೊಂಡಿತು.
ಬೆಳಿಗ್ಗೆ ಅತಿರುದ್ರ ಯಾಗ ಮಂಟಪದಲ್ಲಿ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗ ಮಂಟಪದಲ್ಲಿ ಶತಚಂಡಿಕಾ ಯಾಗ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಶಾಸಕ ರಘುಪತಿ ಭಟ್, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ಬೆಂಗಳೂರಿನ ಮಾಜಿ ವಿಧಾನಸಭಾ ಸದಸ್ಯರಾದ ದಯಾನಂದ ರೆಡ್ಡಿ, ಡಾ. ಜಿ. ಶಂಕರ್, ನಟ ರಕ್ಷಿತ್ ಶೆಟ್ಟಿ ಮತ್ತು ಕುಂದಾಪುರ ಗುತ್ತಿಗೆದಾರ ಕಾರ್ತಿಕ್ ಆರ್. ನಾಯಕ್ ಉಪಸ್ಥಿತರಿದ್ದರು.
ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆ. 22 ರಿಂದ ಮಾ.5ರ ತನಕ ಅತಿರುದ್ರ ಮಹಾಯಾಗ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಿರಂತರವಾಗಿ ಯಾಗ ನಡೆಯಲಿದೆ.
ಮಾ. 2, 3, 4ರಂದು ವಾರಣಾಸಿಯ ಗಂಗಾರತಿ ತಂಡದಿಂದ “ಶಿವಾರತಿ’ ಮಾಡಿಸಲಾಗುವುದು. ಫೆ. 22ರಿಂದ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುವುದು. ವಿಶೇಷ ಆಕರ್ಷಣೆಯಾಗಿ ಪುಂಗನೂರು ತಳಿಯ 5 ಹಸುಗಳನ್ನು ದೇಗುಲಕ್ಕೆ ತರಲಾಗಿದೆ. ಸುಮಾರು 2,000 ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಸಚಿವರು, ಗಣ್ಯರು ಭಾಗವಹಿಸುವರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಮಾ. 4ರ ಸಂಜೆ ದೇಗುಲಕ್ಕೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳನ್ನು ವಿಶೇಷ ಮೆರವಣಿಗೆಯಲ್ಲಿ ಕರೆ ತರಲಾಗುವುದು. ಸಂಜೆ 5.30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅನಂತರ ಸ್ವಾಮೀಜಿಯವರಿಂದ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ. ಮಾ. 5ರಂದು ಯಾಗ ಮಂಟಪದಲ್ಲಿ ಬೆಳಗ್ಗೆ 6.30ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ಕಲಶಾಭಿಷೇಕ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.