ಶಿವರಾಜ ಕುಮಾರ್ ಹೊಸ ಬ್ಯಾನರ್ ಹುಟ್ಟುಹಾಕಿ, ಅದರಲ್ಲಿ “ಮಾನಸ ಸರೋವರ’ ಎಂಬ ಧಾರಾವಾಹಿ ನಿರ್ಮಿಸಲಿದ್ದಾರೆಂಬ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಶನಿವಾರ ಶಿವರಾಜಕುಮಾರ್ ಅವರ “ಶ್ರೀ ಮುತ್ತು ಸಿನಿ ಸರ್ವೀಸ್’ ಬ್ಯಾನರ್‌ಗೆ ಹಾಗೂ “ಮಾನಸ ಸರೋವರ’ ಧಾರಾವಾಹಿಗೆ ಚಾಲನೆ ನೀಡಲಾಯಿತು. ಶಿವರಾಜಕುಮಾರ್ ದಂಪತಿ, ಪುನೀತ್ ರಾಜಕುಮಾರ್ ದಂಪತಿ, ನಿರ್ದೇಶಕರಾದ ಸೂರಿ, ಯೋಗರಾಜ್ ಭಟ್ ಸೇರಿದಂತೆ ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಿವರಾಜಕುಮಾರ್ ಪುತ್ರಿ ನಿವೇದಿತಾ ಈ ಧಾರಾವಾಹಿಯ ನಿರ್ಮಾಪಕರು.
ಶಿವಣ್ಣನಿಗೆ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾವನ್ನು ತಮ್ಮ ಬ್ಯಾನರ್‌ನಲ್ಲಿ ಧಾರಾವಾಹಿ ಮಾಡುತ್ತಿರುವ ಬಗ್ಗೆ ಖುಷಿ ಇದೆಯಂತೆ. “ನಾನು ಪುಟ್ಟಣ್ಣ ಅವರ ಅಭಿಮಾನಿ. ನಾನು 11 ವರ್ಷದವನಾಗಿದ್ದಾಗ ಅವರ “ನಾಗರಹಾವು’ ಸಿನಿಮಾ ನೋಡಿ, ಖುಷಿಪಟ್ಟಿದ್ದೆ. ಜೊತೆಗೆ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎಂದು ಅಪ್ಪಾಜಿಯಲ್ಲಿ ಹೇಳಿದ್ದೆ. ಅವರ “ಅಮೃತ ಘಳಿಗೆ’ ಚಿತ್ರ ಕೂಡಾ ನನಗೆ ತುಂಬಾ ಇಷ್ಟ.
ಇನ್ನು, “ಮಾನಸ ಸರೋವರ’ ಚಿತ್ರವನ್ನು 25 ಸಲ ನೋಡಿದ್ದೇನೆ. ಅವರ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಈಗ “ಮಾನಸ ಸರೋವರ’ ಎಂಬ ಹೆಸರನ್ನಿಟ್ಟುಕೊಂಡು ಧಾರಾವಾಹಿ ಮಾಡುತ್ತಿದ್ದೇವೆ. ಇದು ಅವರಿಗೆ ಸಮರ್ಪಣೆ’ ಎಂದು ತಮ್ಮ ನಿರ್ಮಾಣದ ಚೊಚ್ಚಲ ಧಾರಾವಾಹಿ ಬಗ್ಗೆ ಹೇಳುತ್ತಾರೆ. ಈ ಧಾರಾವಾಹಿ ಮೂಲಕ ಶಿವಣ್ಣ ಮಗಳು ನಿರ್ಮಾಪಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಿದ್ದಾರೆ.
“ಅವಳಿಗೂ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ಆಸೆ ಇತ್ತು. ಹಾಗಾಗಿ, ನಿರ್ಮಾಣದ ಜವಾಬ್ದಾರಿ ಅವಳಿಗೆ ವಹಿಸಲಾಗಿದೆ. ಇದಲ್ಲದೇ, ಅವಳಲ್ಲಿ ಸಾಕಷ್ಟು ಐಡಿಯಾಗಳಿವೆ. ಕೆಲ ದಿನಗಳ ಹಿಂದೆ ಒಂದು ಬ್ಯೂಟಿಫುಲ್ ಕಾನ್ಸೆಪ್ಟ್ವೊಂದನ್ನು ಹೇಳಿದಳು. ಮುಂದೆ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ’ ಎನ್ನುವುದು ಶಿವಣ್ಣ ಮಾತು. ತಮ್ಮ “ಶ್ರೀಮುತ್ತು ಸಿನಿ ಸರ್ವೀಸ್’ ಬ್ಯಾನರ್‌ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಿಸುವ ಯೋಜನೆಯೂ ಶಿವಣ್ಣ ಅವರಿಗಿದೆ.
“ಇದು ನನ್ನ ಬ್ಯಾನರ್, ಅವರ ಬ್ಯಾನರ್ ಎಂದಲ್ಲ. ಎಲ್ಲರ ಬ್ಯಾನರ್ ಒಂದೇ. ಸಿನಿಮಾ ನಿರ್ಮಾಣಕ್ಕೆ, ಬ್ಯಾನರ್ ಹುಟ್ಟುಹಾಕಲು ಅಮ್ಮನೇ ಪ್ರೇರಣೆ. ಈ ಬ್ಯಾನರ್‌ನಲ್ಲಿ ಸಾಕಷ್ಟು ಸಿನಿಮಾ ಮಾಡುವ ಆಲೋಚನೆ ಇದೆ. ಮೊದಲ ಸಿನಿಮಾವಾಗಿ ಮಹಿಳಾ ಪ್ರಧಾನ ಚಿತ್ರವೊಂದನ್ನು ಮಾಡಬೇಕೆಂಬ ಆಸೆ ಇದೆ. ಏಕೆಂದರೆ ಬ್ಯಾನರ್ ಆರಂಭಿಸಿದ್ದು ಅಮ್ಮ. ಜೊತೆಗೆ ಅಪ್ಪು ಹಾಗೂ ನಾನು ಜೊತೆಯಾಗಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಪ್ಪುಗೂ ಆ ಬಗ್ಗೆ ಖುಷಿ ಇದೆ’ ಎಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ ಶಿವಣ್ಣ.