ಕೆಲ ತಿಂಗಳ ಹಿಂದಷ್ಟೇ ನಟ ಶಿವರಾಜಕುಮಾರ್ “ರುಸ್ತುಂ’ ಚಿತ್ರದಲ್ಲಿ ಖಾಕಿ ತೊಟ್ಟು ತೆರೆಮೇಲೆ ಮಿಂಚಿದ್ದನ್ನು ಅಭಿಮಾನಿಗಳು ನೋಡಿ ಎಂಜಾಯ್ ಮಾಡಿದ್ದರು. “ರುಸ್ತುಂ’ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಸದ್ದು ಮಾಡದಿದ್ದರೂ, ಚಿತ್ರ ನೋಡಿದ ಶಿವಣ್ಣ ಅಭಿಮಾನಿಗಳಂತೂ ಖಾಕಿ ಗೆಟಪ್‌ಗೆ ಶಿಳ್ಳೆ-ಚಪ್ಪಾಳೆಯ ಮೆಚ್ಚುಗೆಯನ್ನು ನೀಡಿದ್ದರು. ಈಗ ಮತ್ತೆ ಶಿವಣ್ಣ ಖಾಕಿ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಹೌದು, ಸದ್ಯ ಶಿವರಾಜ್ ಕುಮಾರ್ ಅಭಿನಯದ “ದ್ರೋಣ’ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಇದರ ಬೆನ್ನಲ್ಲೆ ಶಿವಣ್ಣ ಅಭಿನಯಿಸುತ್ತಿರುವ “ಭಜರಂಗಿ-2′ ಚಿತ್ರದ ಚಿತ್ರೀಕರಣ ಕೂಡ ಭರದಿಂದ ನಡೆಯುತ್ತಿದೆ. ಇದಾದ ನಂತರ ಶಿವಣ್ಣ ಅಭಿನಯಿಸಲಿರುವ ಮುಂದಿನ ಚಿತ್ರ ಯಾವುದು ಎನ್ನುವ ಚರ್ಚೆಗಳು ಕೂಡ ನಡೆಯುತ್ತಿದೆ. ಇದಕ್ಕೆ ಉತ್ತರವೆಂಬಂತೆ, ಶಿವಣ್ಣ ಮುಂಬರುವ ಚಿತ್ರದಲ್ಲಿ ಮತ್ತೆ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದು, ಖಾಕಿ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಖದರ್ ತೋರಿಸಲಿದ್ದಾರಂತೆ.
ಗಾಂಧಿನಗರದ ಮೂಲಗಳ ಪ್ರಕಾರ, ಶಿವಣ್ಣ ಮುಂದಿನ ಚಿತ್ರ ಆ್ಯಕ್ಷನ್ ಕಂ ಲವ್, ಥ್ರಿಲ್ಲರ್ ಕಥಾಹಂದರ ಹೊಂದಿದೆ ಎನ್ನಲಾಗುತ್ತಿದ್ದು, ಈಗಾಗಲೆ ಈ ಚಿತ್ರದ ಪ್ರಿ-ಪೊ›ಡಕ್ಷನ್ ಕೆಲಸ ಶುರುವಾಗಿದೆಯಂತೆ. ಇನ್ನು ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಆಕ್ಷನ್-ಕಟ್ ಹೇಳುತ್ತಿದ್ದು, ಈ ಮೂಲಕ ರವಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಕನ್ನಡದಲ್ಲಿ ಈಗಾಗಲೇ ಪುನೀತ್ ರಾಜಕುಮಾರ್ ಅವರೊಂದಿಗೆ “ರಾಜಕುಮಾರ’ ಗಣೇಶ್ ಅವರೊಂದಿಗೆ “ಆರೆಂಜ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಪ್ರಿಯಾ ಆನಂದ್ ಈ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಮೂರನೆ ಬಾರಿ ಕನ್ನಡ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆಯಂತೆ.
ಸದ್ಯ ಟೈಟಲ್ ಇನ್ನೂ ಅಂತಿಮವಾಗದಿರುವ, ಈ ಚಿತ್ರವನ್ನು ಪ್ರಖ್ಯಾತ ನಿರ್ಮಾಣ ಸಂಸ್ಥೆ “ಸತ್ಯಜ್ಯೋತಿ ಫಿಲಂಸ್’ ಬಂಡವಾಳ ಹೂಡಿ ನಿರ್ಮಿಸುತ್ತಿದೆ ಎನ್ನಲಾಗುತ್ತಿದೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ಶಿವಣ್ಣ ಹೊಸಚಿತ್ರದ ಬಗ್ಗೆ ಹೀಗೆ ಒಂದಷ್ಟು ಸುದ್ದಿಗಳಂತೂ ಜೋರಾಗಿ ಓಡಾಡುತ್ತಿದ್ದು, ಚಿತ್ರತಂಡ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ ಮೇಲಷ್ಟೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.